ಎತ್ತಿನ ಗಾಡಿಯನ್ನು ಗ್ರಂಥಾಲಯವನ್ನಾಗಿ ಮಾಡಿಕೊಂಡು ಪುಸ್ತಕ ಹಂಚುತ್ತಿರುವ ಶಿಕ್ಷಕಿ Saaksha Tv
ಭೋಪಾಲ್: ಶಿಕ್ಷಕಿ ಎತ್ತಿನ ಗಾಡಿಯನ್ನು ಗ್ರಂಥಾಲಯವನ್ನಾಗಿ ಮಾಡಿಕೊಂಡು ಬುಡಕಟ್ಟು ವಿದ್ಯಾರ್ಥಿಗಳ ಮನೆ- ಮನೆಗೆ ತೆರಳಿ ಪುಸ್ತಕ ಹಂಚುತ್ತಿರುವ ವಿಶೇಷ ಪ್ರಸಂಗಕ್ಕೆ ಬೇತುಲ್ ಜಿಲ್ಲೆಯ ಭೈನ್ಸ್ದೇಹಿಯ ಬುಡಕಟ್ಟು ಪ್ರದೇಶ ಸಾಕ್ಷಿಯಾಗಿದೆ.
ದೇಶದಲ್ಲಿ ಕೊರೊನಾ ಹೆಚ್ಚುತ್ತಿರುವ ಹಿನ್ನಲೆ ಕೆಲವೊಂದು ರಾಜ್ಯದ ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಅದೇ ರೀತಿಯಾಗಿ ಮಧ್ಯಪ್ರದೇಶದ ಬೇತುಲ್ ಜಿಲ್ಲೆಯ ಭೈನ್ಸ್ದೇಹಿಯ ಬುಡಕಟ್ಟು ಪ್ರದೇಶದ ಹಳ್ಳಿಯೊಂದರ ಶಾಲೆಗೆ ರಜೆ ನೀಡಲಾಗಿದೆ. ಈ ಶಾಲೆಯಲ್ಲಿ 3 ಜನ ಶಿಕ್ಷಕಿಯರಿದ್ದಾರೆ. ಈ ಶಿಕ್ಷಕಿಯರಲ್ಲಿ ಒಬ್ಬರಾದ ಕಮಲಾ ದಾವಂಡೆ ಅವರು, ಸಂಚಾರಿ ಗ್ರಂಥಾಲಯವನ್ನು ಎತ್ತಿನ ಗಾಡಿಯಲ್ಲಿ ಸ್ಥಾಪಿಸಿದ್ದಾರೆ.
ಮನೆ ಮನೆಗೆ ಹೋಗಿ ಬಡ ಮಕ್ಕಳಿಗೆ ಪುಸ್ತಕಗಳನ್ನು ವಿತರಿಸುತ್ತಿದ್ದಾರೆ. ಈ ಮಕ್ಕಳು ಆನ್‍ಲೈನ್ ತರಗತಿಗಳನ್ನು ಕೇಳಲು ಯಾವುದೇ ಸೌಲಭ್ಯವನ್ನು ಹೊಂದಿಲ್ಲ. ಈ ಮಕ್ಕಳು ರೇಡಿಯೋ ಉಪನ್ಯಾಸಗಳನ್ನೇ ಅವಲಂಬಿಸಿದ್ದಾರೆ. ಮಕ್ಕಳಿಗೆ ಸಹಾಯವಾಗಲೆಂದು ಕಮಲಾ ಟೀಚರ್ ಮಕ್ಕಳ ಮನೆ ಮನೆಗೆ ತೆರಳಿ ಪುಸ್ತಕಗಳನ್ನು ನೀಡುತ್ತಿದ್ದಾರೆ. ಈ ಮೂಲಕ ಓದಿಗೆ ಸಹಾಯ ಮಾಡುತ್ತಿದ್ದು ಗ್ರಾಮಸ್ಥರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಕಮಲಾ ದಾವಂಡೆ ಅವರು ಖಾಸಗಿ ವಾಹಿನಿಯೊಂದಿಗೆ ಮಾತನಾಡಿ, ಈ ಗ್ರಾಮದಲ್ಲಿರುವ ಶಾಲೆಯಲ್ಲಿ 87 ಮಕ್ಕಳು ಮತ್ತು ಮೂವರು ಶಿಕ್ಷಕರಿದ್ದಾರೆ. ಕೋವಿಡ್-19 ಕಾರಣ ಅವರು ರಜೆಯಲ್ಲಿದ್ದಾರೆ. ಹೀಗಾಗಿ, ಸದ್ಯಕ್ಕೆ ನಾನೊಬ್ಬಳೇ ಇಲ್ಲಿ ಇರುವ ಶಿಕ್ಷಕಿಯಾಗಿದ್ದನೆ. ಮಕ್ಕಳಿಗೆ ಪುಸ್ತಕಗಳನ್ನು ಹಂಚುವುದು ಅನಿವಾರ್ಯವಾಗಿತ್ತು.
ಹೀಗಾಗಿ ಎಲ್ಲ ಪುಸ್ತಕಗಳನ್ನು ಎತ್ತಿನ ಗಾಡಿಯಲ್ಲಿ ಇಟ್ಟುಕೊಂಡು ಮೊಹಲ್ಲಾ ತರಗತಿಯ ಬ್ಯಾನರ್ ಹಾಕಿಕೊಂಡು ಮನೆ ಮನೆಗೆ ತೆರಳಿ ಮಕ್ಕಳಿಗೆ ಪುಸ್ತಕಗಳನ್ನು ನೀಡುತ್ತಿದ್ದೇನೆ ಎಂದು ಸಂತೋಷದಿಂದ ಹೇಳಿಕೊಂಡಿದ್ದಾರೆ. ಕೊರೊನಾದಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂದು ಶಿಕ್ಷಕಿ ಈ ಕಾರ್ಯ ಮಾಡುತ್ತಿದ್ದಾರೆ. ಇವರ ಕಾರ್ಯಕ್ಕೆ ಜನರು ಶ್ಲಾಘಿಸುತ್ತಿದ್ದಾರೆ.