ಬೆಂಗಳೂರು: ಹೆಮ್ಮಾರಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಹಾಗೂ ಜಂಬೂ ಸವಾರಿಯನ್ನು ಸರಳವಾಗಿ ಆಚರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ.
ಕೊರೊನಾ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಆಚರಣೆಯನ್ನು ಕೈಬಿಡದೆ, ವೈಭವಕ್ಕೆ ಕಡಿವಾಣ ಹಾಕುವುದು ಸೂಕ್ತ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ. ಹೆಚ್ಚಿನ ಜನಸಂದಣಿ ಸೇರದಂತೆ ಸಾಂಕೇತಿಕ ಆಚರಣೆಗೆ ಮಾತ್ರ ಅವಕಾಶ ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.
ದಸರಾ ಆಚರಣೆಗೆ 10 ಕೋಟಿ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಲಾಗುವುದು. ಆಹಾರ ಮೇಳ, ಕ್ರೀಡೆ, ಯುವ ದಸರಾ ಮುಂತಾದ ಕಾರ್ಯಕ್ರಮಗಳು ಈ ಬಾರಿ ಇರುವುದಿಲ್ಲ. ಗಜಪಡೆಯನ್ನು ಸಹ ಕನಿಷ್ಠ 5ಕ್ಕೆ ಸೀಮಿತಗೊಳಿಸಲು ತೀರ್ಮಾನಿಸಲಾಯಿತು ಎಂದರು.
ನಾಡದೇವತೆ ಚಾಮುಂಡೇಶ್ವರಿಯ ಅಗ್ರಪೂಜೆ ಮತ್ತು ದಸರಾ ಉದ್ಘಾಟನೆಯನ್ನು ಕೋವಿಡ್ಗಾಗಿ ಶ್ರಮಿಸಿರುವ ಕೊರೊನಾ ಯೋಧರಾದ ವೈದ್ಯರು, ನರ್ಸ್, ಆಶಾ ಕಾರ್ಯಕರ್ತರು, ಪೌರ ಕಾರ್ಮಿಕರು ಹಾಗೂ ಪೆÇಲೀಸರಿಂದ ನೆರವೇರಿಸಲು ತೀರ್ಮಾನಿಸಲಾಗಿದೆ.
ಅದ್ದೂರಿ ಜಂಬೂ ಸವಾರಿ ಮೆರವಣಿಗೆ ಇಲ್ಲ
ಪ್ರತಿ ವರ್ಷದಂತೆ ಈ ಬಾರಿ ಅದ್ದೂರಿ ಜಂಬೂ ಸವಾರಿ ಮೆರವಣಿಗೆಗೆ ಬ್ರೇಕ್ ಹಾಕಲಾಗಿದೆ. ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವಿದ್ಯುಕ್ತವಾಗಿ ನಾಡದೇವತೆಗೆ ಪೂಜೆ ನೆರವೇರಿಸಿ, 5-6 ಆನೆಗಳನ್ನು ಮಾತ್ರ ಬಳಸಿ ಜಂಬೂ ಸವಾರಿಯನ್ನು ಅರಮನೆ ಆವರಣದಲ್ಲಿ ಮಾತ್ರ ನಡೆಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.
ದಸರಾ ದಿನಗಳಲ್ಲಿ ಮೈಸೂರು ನಗರದಲ್ಲಿ ವಿದ್ಯುತ್ ದೀಪಾಲಂಕಾರ ಮಾಡುವುದಕ್ಕೆ ತೀರ್ಮಾನ ಮಾಡಲಾಗಿದೆ. ಪ್ರಧಾನಮಂತ್ರಿಗಳ ಆತ್ಮನಿರ್ಭರ್ ಭಾರತ ಪರಿಕಲ್ಪನೆಯಂತೆ ಚೀನಿ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡಬಾರದು. ದೇಶೀ ಉತ್ಪನ್ನಗಳಿಗೆ ಆದ್ಯತೆ ನೀಡಬೇಕೆಂದು ಸಿಎಂ ಬಿಎಸ್ವೈ ಸೂಚಿಸಿದ್ದಾರೆ.
ಡಿಸಿಎಂಗಳಾದ ಗೋವಿಂದ ಕಾರಜೋಳ, ಡಾ.ಸಿ.ಎಸ್.ಅಶ್ವತ್ಥ್ ನಾರಾಯಣ್, ಲಕ್ಷ್ಮಣ ಸವದಿ, ಸಚಿವರಾದ ಸಿ.ಟಿ. ರವಿ, ಎಸ್.ಟಿ. ಸೋಮಶೇಖರ್, ಸಂಸದರಾದ ಸುಮಲತಾ ಅಂಬರೀಶ್, ಪ್ರತಾಪ್ ಸಿಂಹ, ಶಾಸಕರು, ಕೆಎಸ್ಟಿಡಿಸಿ ಅಧ್ಯಕ್ಷೆ ಶ್ರುತಿ, ಮುಖ್ಯ ಕಾರ್ಯದರ್ಶಿ ಟಿ. ಎಂ.ವಿಜಯಭಾಸ್ಕರ್ ಸೇರಿದಂತೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.