ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಮುಕ್ತಾಯವಾಗಿದ್ದು, ಹಲವು ಸಮೀಕ್ಷೆಗಳು ಕಾಂಗ್ರೆಸ್ ಬಹುಮತ ಸಾಧಿಸುತ್ತದೆ ಎಂದು ಹೇಳಿದ್ದರೆ, ಕೆಲವು ಸಮೀಕ್ಷೆಗಳು ಅತಂತ್ರ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ಹೇಳಿವೆ. ಹೀಗಾಗಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಅತಂತ್ರ ಸ್ಥಿತಿಯ ಕನಸು ಕಾಣುತ್ತಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ನಮ್ಮ ಷರತ್ತುಗಳಿಗೆ ಒಪ್ಪಿದರೆ ಮೈತ್ರಿಗೆ ಸಿದ್ಧ ಎಂದು ಹೇಳಿದ್ದಾರೆ. ನಮ್ಮ ಪಕ್ಷ 50 ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸವಿದೆ. ಈ ಬಾರಿ ನಮ್ಮ ಷರತ್ತು ಈಡೇರಿಸುವ ಪಕ್ಷದೊಂದಿಗೆ ಮೈತ್ರಿಗೆ ಸಿದ್ಧ ಎಂದು ಹೇಳಿದ್ದಾರೆ. ಸಮ್ಮಿಶ್ರ ಸರ್ಕಾರದಡಿ ಎರಡು ಬಾರಿ ಸಿಎಂ ಆಗಿದ್ದಾಗ ಕುಮಾರಸ್ವಾಮಿ ಇಕ್ಕಟ್ಟಿನ ಸ್ಥಿತಿ ಅನುಭವಿಸಿದ್ದರು. ಈ ಹಿನ್ನೆಲೆಯಲ್ಲಿ ಈ ಬಾರಿ ಸ್ಪಷ್ಟ ನಿಲುವು ಹೊಂದಿದ್ದು, ಕೆಲವು ಷರತ್ತು ಪೂರೈಸಿದರೆ ಮಾತ್ರ ಮೈತ್ರಿಗೆ ಸಿದ್ದ ಎಂದು ಹೇಳಿದ್ದಾರೆ.
ಸರ್ಕಾರ ನಡೆಸಲು ಸ್ವತಂತ್ರ ನೀಡಬೇಕು. ಯಾರ ಅಪ್ಪಣೆ ತೆಗೆದುಕೊಳ್ಳುವಂತಿರಬಾರದು. ಜೆಡಿಎಸ್ ಶಾಸಕರಿಗೆ ಜಲಸಂಪನ್ಮೂಲ, ವಿದ್ಯುತ್, ಸಾರ್ವಜನಿಕರ ಕೆಲಸಗಳ ಖಾತೆ ನೀಡಬೇಕು. ಜೆಡಿಎಸ್ ಪ್ರಣಾಳಿಕೆ ಅಂಶಗಳನ್ನು ಜಾರಿಗೆ ತರಲು ಅವಕಾಶ ನೀಡಬೇಕು ಸೇರಿದಂತೆ ಹಲವರು ಷರತ್ತುಗಳನ್ನು ಮುಂದಿಡಲಿದ್ದಾರೆ ಎನ್ನಲಾಗಿದೆ.








