ಮನುಷ್ಯ ಕಟ್ಟಿದ ಸೇತುವೆ ಕಳೆಗೆ ಹರಿಯಲು ತನಗೆ ಮನಸಿಲ್ಲ ಎಂದು ಪಥ ಬದಲಾಯಿಸಿದ ನದಿಯ ವಿಸ್ಮಯಕಾರಿ ಕಥೆ:
ಕೃಪೆ – ಹಿಂದವಿ ಸ್ವರಾಜ್
ನದಿಯೊಂದು ಮನುಷ್ಯನ ಕೃತಿಯನ್ನು ಧಿಕ್ಕರಿಸಿ ತನ್ನ ದಾರಿ ತಾನು ನೋಡಿಕೊಳ್ಳುವ ವಿಸ್ಮಯದ ಕಥೆ ಗೊತ್ತಾ? ಇಂತಹ ಪ್ರಾಕೃತಿಕ ವಿಚಿತ್ರಗಳು ಘಟಿಸುವುದು ಅಪರೂಪ. ಅಂತದ್ದೊಂದು ನೈಸರ್ಗಿಕ ಬದಲಾವಣೆ ಸಂಭವಿಸಿದ್ದು ಹೊಂಡುರಾಸ್ ರಾಷ್ಟ್ರದ ಚೊಲುಟಿಕಾ ನಗರದಲ್ಲಿ. ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿರುವ ವಿಸ್ಮಯಕಾರಿ ನದಿಯ ಹೆಸರು ಚೊಲುಟೆಕಾ; ದಕ್ಷಿಣ ಹೊಂಡುರಾಸ್ನ ಒಂದು ಪ್ರಮುಖ ನದಿ. ಚೊಲುಟೆಕಾ ನದಿಯ ಸ್ಪ್ಯಾನಿಷ್ ಹೆಸರು ರಿಯೊ ಗ್ರಾಂಡೆ ಒ ಚೊಲುಟೆಕಾ ಎಂದು. ಈ ನದಿಯ ಮೂಲ ಅಥವಾ ಉಗಮ ಸ್ಥಾನ ನೈಋತ್ಯ ಟೆಗುಸಿಗಲ್ಪಾ ಬಳಿಯ ಲೆಪಟೆರಿಕ್ ಎನ್ನಲಾಗುತ್ತದೆ. ಇದು ಫ್ರಾನ್ಸಿಸ್ಕೊ ಮೊರಾಜನ್ ಇಲಾಖೆಯ ವ್ಯಾಪ್ತಿಯಲ್ಲಿದೆ ಮತ್ತು ಅಲ್ಲಿಂದ ಉತ್ತರಕ್ಕೆ ಟೆಗುಸಿಗಲ್ಪಾ ನಗರದ ಮೂಲಕ ಹರಿಯುತ್ತದೆ. ಬಳಿಕ ದಕ್ಷಿಣಕ್ಕೆ ಎಲ್ ಪ್ಯಾರೈಸೊ ಮೂಲಕ ಚೊಲುಟೆಕಾ ನಗರ ತಲುಪುತ್ತದೆ. ಫೊನ್ಸೆಕಾ ಕೊಲ್ಲಿಯ ಕರಾವಳಿ ಪಟ್ಟಣ ಸೆಡೆನೊ ನಡುವೆ ಈ ನದಿಯ ಜೌಗು ಪ್ರದೇಶವಿದೆ. ಮೂಲಗಳ ಮಾಹಿತಿಯ ಪ್ರಕಾರ ಚೊಲುಟೆಕಾ ನದಿಯು ಹರಿವಿನ ಉದ್ದ 349 ಕಿಲೋಮೀಟರ್ ಉದ್ದ. ಇದರ ಹೈಡ್ರೋಗ್ರಾಫಿಕ್ ಜಲಾನಯನ ಪ್ರದೇಶ ಸುಮಾರು 7,681 ಚದರ ಕಿಲೋಮೀಟರ್ ವಿಸ್ತೀರ್ಣ ಹೊಂದಿದೆ.
ಮೇ ಮತ್ತು ಅಕ್ಟೋಬರ್ ನಡುವೆ ಸಂಭವಿಸುವ ಮಳೆಗಾಲದಲ್ಲಿ ಚೊಲುಟೆಕಾ ನೀರಿನ ಪ್ರಮಾಣ ಹೆಚ್ಚುತ್ತದೆ. ಎಲ್ ನಿನೊ ವಿದ್ಯಮಾನದೊಂದಿಗೆ ಇದರ ಜಲಾನಯನ ಪ್ರದೇಶ ತೀವ್ರ ಬರಗಾಲದಿಂದ ಪ್ರಭಾವಿತವಾಗಿರುತ್ತದೆ. ಈ ನದಿಯ ಮುಖ್ಯ ಹಾದಿಯಲ್ಲಿ ಯಾವುದೇ ದೊಡ್ಡ ಅಣೆಕಟ್ಟುಗಳನ್ನು ನಿರ್ಮಿಸಲಾಗಿಲ್ಲ. ಆದರೆ 1998ರಲ್ಲಿ ಮಿಚ್ ಚಂಡಮಾರುತದ ಸಮಯದಲ್ಲಿ ಚೊಲುಟೆಕಾ ನದಿಯ ಪ್ರವಾಹವೇರ್ಪಟ್ಟು ಮಹಾ ಅನಾಹುತವನ್ನೇ ಮಾಡಿತು. ನದೀತೀರ ತೆಗುಸಿಗಲ್ಪಾ ಸಂಪೂರ್ಣ ಕೊಚ್ಚಿ ಹೋಯಿತು. ಅಂತಿಮವಾಗಿ ಚೊಲುಟೆಕಾದಲ್ಲಿ ಅದರ ಸಾಮಾನ್ಯ ಗಾತ್ರಕ್ಕಿಂತ ಆರು ಪಟ್ಟು ಹೆಚ್ಚಾಯಿತು. ಆ ಪ್ರವಾಹ ಅದೆಷ್ಟು ತೀವ್ರವಾಗಿತ್ತೆಂದರೇ ತೆಗುಸಿಗಲ್ಪಾ ವಾಣಿಜ್ಯ ಕೇಂದ್ರ ಭಾಗ ನಾಶವಾಯಿತು. ನದಿ ಹರಿವಿನ ಕೆಳಭಾಗದ ಚಿಕ್ಕ ಪಟ್ಟಣ ಮೊರೊಲಿಕಾ ಸಂಪೂರ್ಣ ಧ್ವಂಸಗೊಂಡಿತು. ನಂತರ ಪಟ್ಟಣವನ್ನು ಮೂರು ಮೈಲುಗಳಷ್ಟು ಮೇಲಕ್ಕೆ ಮರುನಿರ್ಮಾಣ ಮಾಡಬೇಕಾಯಿತು. ಭೀಕರ ಚಂಡಮಾರುತದ ನಂತರ ಚೋಲುಟೆಕಾ ಸೇತುವೆಯ ಕೆಳಗೆ ಹರಿಯುತ್ತಿದ್ದ ನದಿ ತನ್ನ ಮಾರ್ಗ ಬದಲಾಯಿಸಿತು. ಈಗ ವೈರಲ್ ಆಗುತ್ತಿರುವ ಫೋಟೋ ಅದರದ್ದೇ.
ಚೊಲುಟೆಕಾ ಸೇತುವೆ ಅಥವಾ ಕಾರಾಸ್ ಸೇತುವೆಯನ್ನು ಸ್ಪ್ಯಾನಿಷ್ ನಲ್ಲಿ ಪುಯೆಂಟೆ ಡೆ ಚೊಲುಟೆಕಾ ಎನ್ನುತ್ತಾರೆ (Puente de Choluteca). ಹೊಂಡುರಾಸ್ನ ಚೊಲುಟೆಕಾ ನಗರದಲ್ಲಿ ನೆಲೆಗೊಂಡಿರುವ ತೂಗು ಸೇತುವೆಯಿದು. ಅಸಲಿಗೆ ಈ ಸೇತುವೆ ನಗರ ಹೊಂಡುರಾಸ್ನ ರಾಷ್ಟ್ರ ಲಾಂಛನವೂ ಹೌದು. ಇದನ್ನು 1935 ಮತ್ತು 1937ರ ನಡುವೆ ಯುನೈಟೆಡ್ ಸ್ಟೇಟ್ಸ್ ಆರ್ಮಿ ಕಾರ್ಪ್ಸ್ ಆಫ್ ಇಂಜಿನಿಯರ್ಸ್ ಮತ್ತು ಹೊಂಡುರಾನ್ ರಾಜಧಾನಿಯನ್ನು ಬಳಸಿಕೊಂಡು ಪನಾಮೆರಿಕಾನಾ ಹೆಸರಿನ ರಸ್ತೆಯ ನಿರ್ಮಾಣಕ್ಕಾಗಿ ನಿರ್ಮಿಸಿದರು. ಸೇತುವೆಯ ಮಹತ್ವ ಕೇವಲ ಗಾತ್ರದ ವಿಷಯವಲ್ಲ. ಚೊಲುಟೆಕಾ ಸೇತುವೆಯು 300 ಮೀಟರ್ಗಳಷ್ಟು ಉದ್ದವಿದೆ, ಆದರೆ ಇದು ದೇಶದಲ್ಲೇ ಅಥವಾ ನಗರದಲ್ಲಿಯೇ ಅತಿ ಉದ್ದದ ಸೇತುವೆಯಲ್ಲ. ಚೊಲುಟೆಕಾದಲ್ಲಿ ದಿ ಬ್ರಿಡ್ಜ್ ಆಫ್ ದಿ ರೈಸಿಂಗ್ ಸನ್ (ಹೊಸ ಚೊಲುಟೆಕಾ ಸೇತುವೆ) ಎಂಬ ಇನ್ನೊಂದು ಸೇತುವೆ ಇದೆ, ಅದರ ಉದ್ದ 484 ಮೀಟರ್.
ಟಿಬುರ್ಸಿಯೊ ಕ್ಯಾರಿಯಸ್ ಆಂಡಿನೊ ಆಳ್ವಿಕೆಯಲ್ಲಿ ಹಳೆಯ ಚೊಲುಟೆಕಾ ಸೇತುವೆ ನಿರ್ಮಿಸಲಾಯಿತು. ಇದನ್ನು ಪ್ರದರ್ಶಿಸಿದ ಸಮಯದಲ್ಲಿ ಯುನೈಟೆಡ್ ಸ್ಟೇಟ್ಸ್ ಸರ್ಕಾರದ ಸಹಕಾರದೊಂದಿಗೆ, ಇದು ದೇಶದ ಶ್ರೇಷ್ಠ ವಾಸ್ತುಶಿಲ್ಪದ ಕೆಲಸಗಳಲ್ಲಿ ಒಂದಾಗಿದೆ ಎಂದು ಪರಿಗಣಿಸಲಾಐತು. ಈ ಸೇತುವೆಯು ಗೋಲ್ಡನ್ ಗೇಟ್ ಸೇತುವೆಯ ಕೆಲವು ಪ್ರತಿಕೃತಿಗಳಲ್ಲಿ ಒಂದಾಗಿದೆ ಹಾಗೂ ಇನ್ನೂ ಅಸ್ತಿತ್ವದಲ್ಲಿದೆ. ಇದು ಗ್ವಾಟೆಮಾಲಾದಿಂದ ಪನಾಮಕ್ಕೆ ಸಂಚಾರದ ಹರಿವನ್ನು ನಿಯಂತ್ರಿಸುತ್ತದೆ. 1998ರಲ್ಲಿ ಮಿಚ್ ಚಂಡಮಾರುತದಿಂದ ಸೇತುವೆ ಭಾಗಶಃ ನಾಶವಾಯಿತಾದರೂ, ಸೇತುವೆಯನ್ನು 2002ರಲ್ಲಿ ರಿಕಾರ್ಡೊ ಮಡುರೊ ಸರ್ಕಾರದಲ್ಲಿ ಮರು ರೂಪಿಸಲಾಯಿತು. ಹಳೆ ಸೇತುವೆಯನ್ನೇ ಇಂದಿಗೂ ಲಘು ಸಂಚಾರಕ್ಕೆ ಬಳಸಲಾಗುತ್ತಿದೆ.
1990ರ ದಶಕದಲ್ಲಿ, ನಗರಕ್ಕೆ ಹೊಸ ಬೈಪಾಸ್ ರಸ್ತೆ ಮತ್ತು ಎರಡನೇ ಸೇತುವೆಯನ್ನು ಯೋಜಿಸಲಾಯಿತು. ಬ್ರಿಡ್ಜ್ ಆಫ್ ರೈಸಿಂಗ್ ಸನ್ (ಸ್ಪಾನಿಷ್ ಭಾಷೆಯಲ್ಲಿ ಪುಯೆಂಟೆ ಸೋಲ್ ನಾಸಿಯೆಂಟೆ) ಎಂದು ಕರೆಯಲ್ಪಡುವ ಹೊಸ ಚೊಲುಟೆಕಾ ಸೇತುವೆಯನ್ನು 1996 ಮತ್ತು 1998ರ ನಡುವೆ ಹಜಾಮಾ ಆಂಡೋ ಕಾರ್ಪೊರೇಷನ್ ನಿರ್ಮಿಸಿತು ಮತ್ತು ಲ್ಯಾಟಿನ್ ಅಮೆರಿಕಾದಲ್ಲಿ ಜಪಾನಿನ ಕಂಪನಿಯಿಂದ ನಿರ್ಮಿಸಲಾದ ಅತಿದೊಡ್ಡ ಸೇತುವೆ ಇದಾಗಿದೆ. ಸೇತುವೆಯನ್ನು ಬಳಕೆಗೆ ನಿಯೋಜಿಸಿದ ಅದೇ ವರ್ಷದಲ್ಲಿ, ಹೊಂಡುರಾಸ್ ಮಿಚ್ ಚಂಡಮಾರುತದಿಂದ ಅಪ್ಪಳಿಸಿತು. ಇದು ರಾಷ್ಟ್ರ ಮತ್ತು ಅದರ ಮೂಲಸೌಕರ್ಯಕ್ಕೆ ಗಣನೀಯ ಹಾನಿಯನ್ನುಂಟು ಮಾಡಿತು. ಹಳೆಯ ಸೇತುವೆಯನ್ನು ಒಳಗೊಂಡಂತೆ ಅನೇಕ ಸೇತುವೆಗಳು ಹಾನಿಗೊಳಗಾದವು; ಕೆಲವು ನಾಶವಾದವು. ಆದರೆ ಹೊಸ ಚೊಲುಟೆಕಾ ಸೇತುವೆ ಮಾತ್ರ ಸಣ್ಣ ಹಾನಿಯೊಂದಿಗೆ ಉಳಿದುಕೊಂಡಿದೆ. ಸೇತುವೆಯು ಪರಿಪೂರ್ಣ ಸ್ಥಿತಿಯಲ್ಲಿದ್ದಾಗ, ಸೇತುವೆಯ ಎರಡೂ ತುದಿಗಳಲ್ಲಿದ್ದ ರಸ್ತೆಗಳು ಈಗ ಸಂಪೂರ್ಣವಾಗಿ ಕಣ್ಮರೆಯಾಗಿವೆ; ಅವುಗಳ ಹಿಂದಿನ ಅಸ್ತಿತ್ವದ ಯಾವುದೇ ಗೋಚರ ಕುರುಹು ಉಳಿದಿಲ್ಲ.
ಈ ಸಮಯದಲ್ಲಿ, ಚಂಡಮಾರುತದಿಂದ ಉಂಟಾದ ಬೃಹತ್ ಪ್ರವಾಹದ ಸಮಯದಲ್ಲಿ ಸೇತುವೆಯ ಮೇಲೆ 100 ಮೀಟರ್ ಗಿಂತ ಹೆಚ್ಚು ಇರುವ ಚೋಲುಟೆಕಾ ನದಿಯು ಹೊಸ ಚಾನಲ್ ಅನ್ನು ರೂಪಿಸಿಕೊಂಡಿದೆ. ಚಂಡಮಾರುತದ ನಂತರ ಚೊಲುಟೆಕಾ ಸೇತುವೆಯ ಕೆಳಗೆ ಹರಿಯದೇ ತನ್ನದೇ ಪ್ರತ್ಯೇಕ ಮಾರ್ಗ ಸೃಷ್ಟಿಸಿಕೊಂಡಿತು. ಆ ಹಳೆಯ ಸೇತುವೆಗೆ “ದಿ ಬ್ರಿಡ್ಜ್ ಟು ನೋವೇರ್” ಎಂದು ಹೆಸರಿಟ್ಟು, ಸೇತುವೆಯನ್ನು ಹೆದ್ದಾರಿಗೆ ಮರು ಸಂಪರ್ಕಿಸಲಾಯಿತು.
-ರೂಪಾ ಮಾಲತೇಶ್