ಜೈಪುರ : ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಗೆ ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಬಿಗ್ ಶಾಕ್ ಕೊಟ್ಟಿದ್ದಾರೆ. ಒಂದು ವೇಳೆ ವಿಧಾನಸಭೆಯಲ್ಲಿ ವಿಶ್ವಾಸಮತಯಾಚನೆಯ ಸಂದರ್ಭ ಉಂಟಾದರೇ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪರ ಮತ ಚಲಾಯಿಸಿದಂತೆ ತನ್ನ ಶಾಸಕರಿಗೆ ಬಿಎಸ್ ಪಿ ವಿಪ್ ಜಾರಿ ಮಾಡಿದೆ.
ಇದೇ ತಿಂಗಳ 31 ರಂದು ವಿಧಾನಸಭೆ ಅಧಿವೇಶನ ಕರೆಯುವಂತೆ ಅಶೋಕ್ ಗೆಹ್ಲೋಟ್ ಅವರು ರಾಜಸ್ಥಾನ ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ. ಹೀಗಿರುವಾಗಲೇ ಮಾಯಾವತಿ ವಿಶ್ವಾಸ ಮತಯಾಚನೆ ವೇಳೆ ಕಾಂಗ್ರೆಸ್ ವಿರುದ್ಧ ಮತ ಹಾಕಿ ಎಂದು ಖಡಕ್ ಸೂಚನೆ ಕೊಟ್ಟಿದ್ದಾರೆ. ಅಲ್ಲದೆ ಒಂದು ವೇಳೆ ವಿಪ್ ಉಲ್ಲಂಘಿಸಿದ್ರೆ ಅಮಾನತು ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಬಿಎಸ್ ಪಿ ಪ್ರಧಾನ ಕಾರ್ಯದರ್ಶಿ ಸತೀಶ್ ಚಂದ್ರ ಮಿಶ್ರಾ ಅವರು ಹೇಳಿಕೆ ಬಿಡುಗಡೆ ಮಾಡಿದ್ದು,’ಎಲ್ಲಾ ಆರು ಶಾಸಕರಿಗೆ ಪ್ರತ್ಯೇಕವಾಗಿ ನೋಟಿಸ್ ನೀಡಲಾಗಿದೆ. ‘ಬಿಎಸ್ಪಿ ಮಾನ್ಯತೆ ಪಡೆದ ರಾಷ್ಟ್ರೀಯ ಪಕ್ಷ. ಹಾಗಾಗಿ ಸಂವಿಧಾನದ 10ನೇ ಪರಿಚ್ಛೇದದ ನಾಲ್ಕನೇ ಖಂಡಿಕೆಯಲ್ಲಿ ಉಲ್ಲೇಖಸಿರುವಂತೆ ರಾಜ್ಯಮಟ್ಟದಲ್ಲಿ ಯಾವುದೇ ವಿಲೀನ ಪ್ರಕ್ರಿಯೆ ಸಾಧ್ಯವಿಲ್ಲ. ರಾಷ್ಟ್ರದ ಎಲ್ಲ ಕಡೆ ವಿಲೀನವಾಗದೇ, ಈ ಆರು ಜನ ಶಾಸಕರು ಬೇರೆ ಪಕ್ಷಗಳೊಂದಿಗೆ ವಿಲೀನಗೊಳ್ಳಲು ಸಾಧ್ಯವಿಲ್ಲ,’ ಎಂದು ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿಸಿದ್ದಾರೆ.
ಒಂದು ವೇಳೆ ಈ ಆರು ಶಾಸಕರು ಪಕ್ಷದ ವಿಪ್ ಉಲ್ಲಂಘಿಸಿದರೆ, ಅವರು ವಿಧಾನಸಭೆಯಿಂದ ಅನರ್ಹರಾಗಲು ಹೊಣೆಗಾರರಾಗಿರುತ್ತಾರೆ ಎಂದು ಮಿಶ್ರಾ ತಿಳಿಸಿದ್ದಾರೆ.
ಸಂದೀಪ್ ಯಾದವ್, ವಾಜಿಬ್ ಅಲಿ, ದೀಪ್ಚಂದ್ ಖೇರಿಯಾ, ಲಖನ್ ಮೀನಾ, ಜೋಗೇಂದ್ರ ಅವನಾ ಮತ್ತು ರಾಜೇಂದ್ರ ಗುಧಾ ಎಂಬ ಆರು ಮಂದಿ ಶಾಸಕರಿಗೆ ಸದ್ಯ ಬಿಎಸ್ಪಿ ವಿಪ್ ಜಾರಿ ಮಾಡಿದೆ.