ಬೆಂಗಳೂರು : ಕೊರೊನಾ ಲಾಕ್ ಡೌನ್ ಸಡಿಲಿಕೆ ಬಳಿಕ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೊನಾ ವೈರಸ್ ತನ್ನ ಕಬಂಧ ಬಾಹುಗಳನ್ನು ರಾಕೆಟ್ ವೇಗದಲ್ಲಿ ಚಾಚುತ್ತಿದೆ. ನಗರದಲ್ಲಿ ಪ್ರತಿ ದಿನ ಹೊಸದಾಗಿ ಸಾವಿರಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿರೋದು ಮೆಟ್ರೋ ಮಂದಿಯ ಎದೆ ಬಡಿತ ಹೆಚ್ಚಿಸಿದೆ.
ಬೆಂಗಳೂರಿನಲ್ಲಿ ನೆಲೆಸಿದ್ದ ಎಷ್ಟೋ ಜನರು ಇದೀಗ ತಮ್ಮ ಊರುಗಳತ್ತ ಹೆಜ್ಜೆ ಹಾಕುತ್ತಿದ್ದಾರೆ. ಏತನ್ಮಧ್ಯೆ ಈ ವಿಚಾರವಾಗಿ ಚರ್ಚಿಸಲು ಸಿಎಂ ಬಿ.ಎಸ್ ಯಡಿಯೂರಪ್ಪ ಇಂದು ಬೆಂಗಳೂರು ಶಾಸಕರ ಸಭೆ ಕರೆದಿದ್ದಾರೆ.
ಇಂದು ಸಂಜೆ 4 ಗಂಟೆಗೆ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಯಲಿದೆ. ಬೆಂಗಳೂರಿನಲ್ಲಿ ಕೊರೊನಾ ವೈರಸ್ ನಿಯಂತ್ರಣ, ಭಾನುವಾರದ ಲಾಕ್ ಡೌನ್ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಸಿಎಂ ಬಿ.ಎಸ್. ಯಡಿಯೂರಪ್ಪ ಚರ್ಚೆ ನಡೆಸಲಿದ್ದಾರೆ. ಬೆಂಗಳೂರಿನ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನ 27 ಶಾಸಕರಿಗೆ ಸಭೆಗೆ ಹಾಜರಾಗುವಂತೆ ಆಹ್ವಾನ ನೀಡಲಾಗಿದೆ.








