ಬೆಂಗಳೂರು: ಸರಣಿ ಶಿಕ್ಷಕರ ಸಾವು ಹಾಗೂ ಮಕ್ಕಳ ಜೀವಕ್ಕೆ ಆಪತ್ತು ತಂದಿದ್ದ ಶಿಕ್ಷಣ ಇಲಾಖೆಯ ವಿದ್ಯಾಗಮ ಯೋಜನೆಗೆ ರಾಜ್ಯಾದ್ಯಂತ ಆಕ್ರೋಶ ಹೆಚ್ಚುತ್ತಿದ್ದಂತೆ ರಾಜ್ಯ ಸರ್ಕಾರ ಮಂಡಿಯೂರಿದೆ.
ಶಿಕ್ಷಕರು ಸೇರಿದಂತೆ ಪೋಷಕರಿಂದ ತೀವ್ರ ಟೀಕೆಗೆ ಗುರಿಯಾಗಿದ್ದ ವಿದ್ಯಾಗಮ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.
ವಿದ್ಯಾಗಮ ಯೋಜನೆ ಆರಂಭದ ನಂತರ ಎಷ್ಟು ಮಂದಿ ಶಿಕ್ಷಕರು ಕೊರೊನಾಗೆ ಬಲಿಯಾಗಿದ್ದಾರೆ ಎಂಬುದರ ಬಗ್ಗೆ ಜಿಲ್ಲಾವಾರು ಅಂಕಿ-ಅಂಶಗಳ ಸಂಗ್ರಹಕ್ಕೆ ಶಿಕ್ಷಣ ಇಲಾಖೆಗೆ ಸೂಚನೆ ನೀಡಿರುವ ಸುರೇಶ್ ಕುಮಾರ್, ಅಲ್ಲಿಯವರೆಗೆ ವಿದ್ಯಾಗಮ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಲು ಆದೇಶ ನೀಡಿದ್ದಾರೆ.
ವಿವಿಧ ವಲಯಗಳಿಂದ ಪ್ರಕಟವಾಗುತ್ತಿರುವ ಕಾಳಜಿಗೆ ಮನ್ನಣೆ ಕೊಟ್ಟು ಶಿಕ್ಷಣ ಇಲಾಖೆ ಈ ಜಿಲ್ಲಾವಾರು ಅಂಕಿ-ಅಂಶಗಳ ಸ್ವೀಕಾರ, ಅದರ ಸಮರ್ಪಕ ವಿಶ್ಲೇಷಣೆ ಪೂರ್ಣಗೊಳ್ಳುವವರೆಗೆ ವಿದ್ಯಾಗಮ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು, ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಸುರೇಶ್ಕುಮಾರ್ ಫೇಸ್ಬುಕ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಅಖಾಡಕ್ಕೆ ಯಡಿಯೂರಪ್ಪ ಅವರೇ ಎಂಟ್ರಿ ಕೊಡಬೇಕಾಯ್ತಾ..!
ರಾಜ್ಯ ಸರ್ಕಾರದ ಅವೈಜ್ಞಾನಿಕ ನಿರ್ಧಾರಗಳ ಬಗ್ಗೆ ಜನಾಭಿಪ್ರಾಯ ಹಾಗೂ ಜನರ ಆಕ್ರೋಶ ಹೆಚ್ಚಾದರೂ ಸಂಬಂಧ ಪಟ್ಟ ಇಲಾಖೆಗಳಾಗಲೀ, ಸಚಿವರಾಗಲಿ ಮಣಿಯದ ಹಲವು ಉದಾಹರಣೆಗಳು ರಾಜ್ಯದ ಜನರ ಮುಂದಿವೆ.
ಇದೀಗ ವಿದ್ಯಾಗಮ ಯೋಜನೆ ವಿರುದ್ಧ ಶಿಕ್ಷಕ ವರ್ಗ ಹಾಗೂ ಪೋಷಕರು ದೊಡ್ಡಮಟ್ಟದಲ್ಲಿ ಧ್ವನಿ ಎತ್ತಿದರೂ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹಾಗೂ ಅಧಿಕಾರಿಗಳು ತಲೆ ಕೆಡಿಸಿಕೊಳ್ಳಲಿಲ್ಲ. ಈ ವೇಳೆ ಎಂಟ್ರಿ ಕೊಟ್ಟವರೇ ರಾಜಾಹುಲಿ ಖ್ಯಾತಿಯ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ. ಮಾಧ್ಯಮಗಳಲ್ಲಿ ಜನರು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವುದನ್ನು ಖುದ್ದು ಯಡಿಯೂರಪ್ಪ ಗಮನಿಸಿದ್ದಾರೆ. ಜತೆಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಕೂಡ ಮುಖ್ಯಮಂತ್ರಿಗಳಿಗೆ ಕರೆ ಮಾಡಿ ವಿದ್ಯಾಗಮ ಕಾರ್ಯಕ್ರಮ ನಿಲ್ಲಿಸುವಂತೆ ಮನವಿ ಮಾಡಿದ್ದಾರೆ. ಇದೆಲ್ಲವನ್ನೂ ಗಮನಿಸಿದ ಸಿಎಂ ಯಡಿಯೂರಪ್ಪ, ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಕರೆ ಮಾಡಿ ಯೋಜನೆ ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಸಿಎಂ ಬಿಎಸ್ವೈ ಕರೆ ಬರುವವರೆಗೆ ಪಟ್ಟುಹಿಡಿದು ಕುಳಿತಿದ್ದ ಸುರೇಶ್ ಕುಮಾರ್ ಕೊನೆಗೂ ಮಂಡಿಯೂರಿದ್ದಾರೆ.
ಎರಡು ದಿನಗಳ ಹಿಂದಷ್ಟೇ ಮಾಸ್ಕ್ ದಂಡ ಹೆಚ್ಚಳವನ್ನು ಕಡಿಮೆ ಮಾಡುವಾಗ, ಶಾಲೆಗಳನ್ನು ಆರಂಭಿಸುವ ವಿಚಾರದಲ್ಲಿ ಎದುರಾಗಿದ್ದ ಗೊಂದಲಗಳಿಗೆ ಖುದ್ದು ಯಡಿಯೂರಪ್ಪ ಅವರೇ ಎಂಟ್ರಿ ಕೊಟ್ಟು ಜನರ ಆಕ್ರೋಶ ತಣ್ಣಗಾಗುವಂತೆ ಮಾಡಿರುವುದು ಗಮನಾರ್ಹವಾಗಿದೆ.
ಸರ್ಕಾರಕ್ಕೆ ಧನ್ಯವಾದ ಹೇಳಿದ ಕುಮಾರಸ್ವಾಮಿ
ರಾಜ್ಯಾದ್ಯಂತ ಆಕ್ರೋಶಕ್ಕೆ ಗುರಿಯಾಗಿದ್ದ ವಿದ್ಯಾಗಮ ಯೋಜನೆಯನ್ನು ತಾತ್ಕಾಲಿಕವಾಗಿ ರದ್ದು ಮಾಡಲು ರಾಜ್ಯ ಸರ್ಕಾರ ಮುಂದಾಗಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಧನ್ಯವಾದ ತಿಳಿಸಿದ್ದಾರೆ.
ಕಾರ್ಯಕ್ರಮ ರದ್ದು ಮಾಡಲು ಕುಮಾರಸ್ವಾಮಿ ಸೋಮವಾರದವರೆಗೆ ಗುಡುವು ನೀಡಿದ್ದರು. ಜತೆಗೆ ಸಿಎಂ ಯಡಿಯೂರಪ್ಪ ಅವರಿಗೆ ಕರೆ ಮಾಡಿ ಮಾತನಾಡಿದ್ದರು. ಇದಾದ ಕೆಲವೇ ನಿಮಿಷಗಳಲ್ಲಿ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಆದೇಶ ನೀಡಿರುವುದು ಕೊರೊನಾದಿಂದ ಸಂಕಷ್ಟದಲ್ಲಿದ್ದ ಶಿಕ್ಷಕರ ನೋವಿಗೆ ಸರ್ಕಾರ ಸ್ಪಂದಿಸಿದೆ. ಹೀಗಾಗಿ ಸರ್ಕಾರಕ್ಕೆ ಧನ್ಯವಾದ ತಿಳಿಸುತ್ತೇನೆ ಎಂದಿದ್ದಾರೆ.