ವಿಜಯಪುರ: ರಾಜ್ಯದಲ್ಲಿ ಸದ್ಯದಲ್ಲೇ ನಾಯಕತ್ವ ಬದಲಾವಣೆ ಆಗುತ್ತೆ, ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯೋದು ಪಕ್ಕಾ, ಉತ್ತರ ಕರ್ನಾಟಕ ಭಾಗದವರೇ ಮುಖ್ಯಮಂತ್ರಿ ಆಗ್ತಾರೆ ಎಂದು ಹೇಳಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.
ಮುಂದಿನ ಮೂರು ವರ್ಷ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇರುತ್ತದೆ, ಆದರೆ, ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ ಎಂದು ನಾನು ಹೇಳುವುದಿಲ್ಲ ಎಂದು ಯತ್ನಾಳ್ ಮತ್ತೆ ತಿರುಗೇಟು ನೀಡಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಅವರು, ಬೇರೆ ಸಚಿವರಂತೆ ಯಡಿಯೂರಪ್ಪ 3 ವರ್ಷ ಸಿಎಂ ಆಗಿರುತ್ತಾರೆ, ಸೂರ್ಯ ಚಂದ್ರರು ಇರುವ ತನಕ ಸಿಎಂ ಆಗಿರುತ್ತಾರೆ ಎಂದು ನಾನೇನೂ ಹೇಳುವುದಿಲ್ಲ. ಈ ಸರ್ಕಾರದಲ್ಲಿ ಬೆಂಗಳೂರಿಗೊಂದು ನ್ಯಾಯ, ಉತ್ತರ ಕರ್ನಾಟಕಕ್ಕೊಂದು ನ್ಯಾಯದ ರೀತಿಯಲ್ಲಿ ವರ್ತಿಸುತ್ತಿದೆ ಎಂದು ಟೀಕಿಸಿದರು.
ಭೀಮಾ ಪ್ರವಾಹ ಪೀಡಿತರಿಗೆ 10ಸಾವಿರ ರೂ. ಪರಿಹಾರ ನೀಡಿದೆ. ಆದರೆ, ಬೆಂಗಳೂರು ಮಳೆ ಸಂತ್ರಸ್ತರಿಗೆ 25 ಸಾವಿರ ರೂ. ಪರಿಹಾರ ಹಂಚಿದ್ದಾರೆ. ನಾನು ಅಭಿವೃದ್ಧಿ ಪರ ಧ್ವನಿ ಎತ್ತಿದ್ದಕ್ಕೆ ವಿಜಯಪುರ ಮಹಾನಗರ ಪಾಲಿಕೆಗೆ 195 ಕೋಟಿ ರೂ ಹಣ ಬಿಡುಗಡೆ ಮಾಡಿದ್ದಾರೆ. ಅಷ್ಟೇ ಅಲ್ಲ, ರಾಜ್ಯದ 10 ಮಹಾನಗರ ಪಾಲಿಕೆಗಳಿಗೂ ಅನುದಾನ ಬಿಡುಗಡೆ ಮಾಡಿದ್ದಾರೆ ಎಂದರು.
ಸಿಎಂ ಬದಲಾವಣೆ ಬಗ್ಗೆ ಮಾತನಾಡಿದ್ದಕ್ಕೆ ಅನುದಾನ ಬಂತು..
ನಾನು ಈ ಹಿಂದೆ ಯಡಿಯೂರಪ್ಪ ಅವರನ್ನು ಹಲವಾರು ಬಾರಿ ಭೇಟಿಯಾಗಿದ್ದೆ. ಅನುದಾನ ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಆದರೆ, ಮಾಡಿರಲಿಲ್ಲ. ಆದರೆ, ಮೊನ್ನೆ ಸಿಎಂ ಬದಲಾವಣೆ ಬಗ್ಗೆ ಮಾತನಾಡಿದರ ಫಲವಾಗಿ ಕೇವಲ 24 ಗಂಟೆಗಳಲ್ಲಿ ವಿಜಯಪುರ ಮಹಾನಗರ 125 ಕೋಟಿ ರೂ ಬಿಡುಗಡೆ ಮಾಡಿದ್ದಾರೆ ಎಂದು ಯತ್ನಾಳ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ನಾನು ಮಾತನಾಡಿದ್ದು ಪಕ್ಷ ವಿರೋಧಿಯಲ್ಲ. ಮೊದಲು ನಾನೊಬ್ಬ ಜನಪ್ರತಿನಿಧಿ. ನಮಗೆ ದೇಶ ಮೊದಲು. ನಂತರ ಪಕ್ಷ. ನಂತರ ನಾನು ಎಂದು ಬಿಜೆಪಿ ಕಲಿಸಿಕೊಟ್ಟಿದೆ. ಇದರಲ್ಲಿ ಸ್ವಾರ್ಥವೇನಿದೆ? ಆಡಳಿತ ಪಕ್ಷದಲ್ಲಿದ್ದು ಪ್ರಶ್ನೆ ಮಾಡಬಾರದು ಎಂದು ಎಲ್ಲಿ ಹೇಳಲಾಗಿದೆ. ತಮ್ಮ ವಿರುದ್ಧ ಶಿಸ್ತುಕ್ರಮಕ್ಕೆ ಪತ್ರ ಬರೆಯುವರು ಬರೆಯಲಿ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಸಿಎಂ ನಮ್ಮ ಪಕ್ಷದವರಿದ್ದಾರೆಂದು ಸುಮ್ಮನಿರಲು ಸಾಧ್ಯವಿಲ್ಲ. 10 ಸಲ ಸಿಎಂ ಭೇಟಿಯಾಗಿ ಅನುದಾನ ಕೇಳಿದ್ದೆ. ಆದರೆ, ನೀಡಲಿಲ್ಲ. ಹೀಗಾಗಿ ನ್ಯಾಯಪರ ಧ್ವನಿ ಎತ್ತಿದ್ದೇನೆ. ಇದು ಪಕ್ಷದ ಶಿಸ್ತಿನ ಪ್ರಶ್ನೆಯಲ್ಲ. ನಾನು ಕೇಳಿದ್ದರಲ್ಲಿ ತಪ್ಪೇನಿದೆ ಎಂದು ಯತ್ನಾಳ್ ಪ್ರಶ್ನಿಸಿದ್ದಾರೆ.
ನಾನು ಯಾವುದೇ ಹುದ್ದೆಯನ್ನೂ ಅಪೇಕ್ಷೆ ಪಟ್ಟಿಲ್ಲ. ಮಂತ್ರಿ ಗಾದಿಗಾಗಿ ನಾನು ಪ್ರಯತ್ನಿಸಿಲ್ಲ. ಇನ್ನು ಸಿಎಂ ಹೇಗೆ ಆಗಲು ಸಾಧ್ಯ? ತಾವು ಸಿಎಂ ಆಗಲಿ ಎಂದು ಉತ್ತರ ಕರ್ನಾಟಕದ ಎಲ್ಲ ಪ್ರತಿನಿಧಿಗಳು ಹೇಳಿದ್ದಾರೆ. ಅಂದು ಮಾತನಾಡಿದ್ದಕ್ಕೆ ಇಂದು 200 ಕೋಟಿ ರೂ ಅನುದಾನ ಬಂದಿದೆ ಎಂದು ಲೇವಡಿ ಮಾಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel