ಆಸ್ತಿನಾಶಕ್ಕೆ ರಾಜ್ಯದಲ್ಲಿ ಬುಲ್ಡೋಜರ್ ಬಳಸುವ ಕ್ರಮ ಸರಿಯಲ್ಲ : ಹೆಚ್ ವಿಶ್ವನಾಥ್
ಮೈಸೂರು: ರಾಜ್ಯದಲ್ಲೂ ಬುಲ್ಡೋಜರ್ ಬಳಸುವ ಕ್ರಮ ಜಾರಿಗೆಯಾಗ ಬೇಕು ಎಂಬ ಕೂಗು ಕೇಳಿಬರುತ್ತಿರುವ ಬೆನ್ನಲ್ಲೇ ಕರ್ನಾಟಕದಲ್ಲಿ ಶಾಂತಿ ಕದಡುವವರ ಆಸ್ತಿನಾಶಕ್ಕೆ ಬುಲ್ಡೋಜರ್ ಬಳಸುವ ಕ್ರಮ ಸರಿಯಲ್ಲ ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 1976ರಲ್ಲಿ ತುರ್ತುಪರೀಸ್ಥಿತಿಯಲ್ಲಿ ಸಂಜಯ್ ಗಾಂಧಿ ಸಹ ಇದೇ ರೀತಿ ಬುಲ್ಡೋಜರ್ ಕ್ರಮ ಮಾಡಿದರು. ಆದರೆ ನಂತರ ನಡೆದ ಚುನಾವಣೆಯಲ್ಲಿ ಸೋತರು. ಇದು ನೆನಪಿರಲಿ ಎಂದು ತಾಕೀತು ನೀಡಿದರು.
ಹಾಗೇ ಮುಸ್ಲಿಂ ವ್ಯಾಪಾರಸ್ಥರಿಂದ ಅಕ್ಷಯ ತೃತೀಯಕ್ಕೆ ಚಿನ್ನ ಖರೀದಿ ಮಾಡಬಾರದು ಎಂಬ ವಿಚಾರವಾಗಿ, ಆ ಮುತಾಲಿಕ್ ಯಾರು? ಗ್ರಾಮ ಪಂಚಾಯಿತಿ ಮೆಂಬರ್ ಆಗಿದ್ರಾ? ಇದು ಮುತಾಲಿಕ್ ಸರಕಾರವೋ? RSS ಸರಕಾರವೋ ಅಥವಾ ಶ್ರೀರಾಮಸೇನೆ ಸರಕಾರವೋ? ಮುತಾಲಿಕ್ ಸರಕಾರ ನಡೆಸುತ್ತಿದ್ದಾರಾ? ಕೇವಲ ಕೀಟಲೆ ಮಾಡಿಕೊಂಡು ಮಾತನಾಡುವರಿಗೆ ಮಣೆ ಹಾಕಬೇಡಿ ಎಂದು ಎಚ್ಚರಿಸಿದರು.
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ತಮ್ಮ ಹೆಸರು ಇಡಬೇಡಿ ಎಂದು ಹೇಳಿದ ಯಡಿಯೂರಪ್ಪ ಅವರು ಹೇಳಿರುವುದು ದೊಡ್ಡತನ. ಶಾಂತವೇರಿ ಗೋಪಾಲಗೌಡರು, ಕುವೆಂಪು, ಕಡಿದಾಳು ಮಂಜಪ್ಪ ಅವರಂಥವರ ಹೆಸರು ಸರಕಾರಕ್ಕೆ ನೆನಪಿಗೆ ಬರಲಿಲ್ವಾ? ಎಂದು ಪ್ರಶ್ನಿಸಿದ್ದಾರೆ.
ಇನ್ನೂ ಅದಾನಿ, ಅಂಬಾನಿ ಕೈಗಾರೊಕೋದ್ಯಮಿಗಳು. ಅವರು ಶ್ರೀಮಂತರಾಗೋದು ಸಹಜ. ಸಿದ್ದರಾಮಯ್ಯ ಅವರೇ ನಿಮ್ಮ ಆಸ್ತಿ ಎಷ್ಟು? ಈಗ ನೀವು ಸ್ಥಿತಿವಂತರಾಗಿಲ್ವಾ? ಇದನ್ನು ಹೇಳಿ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.