ನ.3ಕ್ಕೆ ಉಪಚುನಾವಣೆ, ನ.10ಕ್ಕೆ ಫಲಿತಾಂಶ
ಅ.9ರಂದು ಚುನಾವಣಾ ಅಧಿಸೂಚನೆ
ಅ.16 ನಾಮಪತ್ರ ಸಲ್ಲಿಕೆಗೆ ಕೊನೆ ದಿನ
ಅ..19 ನಾಮಪತ್ರ ವಾಪಸ್‍ಗೆ ಕಡೆಯ ದಿನ
ಬೆಂಗಳೂರು: ಲಾಕ್‍ಡೌನ್ ಬಳಿಕ ರಾಜ್ಯದಲ್ಲಿ ಚುನಾವಣಾ ಜ್ವರ ಏರಲು ಕೇಂದ್ರ ಚುನಾವಣಾ ಆಯೋಗ ಮುಹೂರ್ತ ಫಿಕ್ಸ್ ಮಾಡಿದೆ. ರಾಜರಾಜೇಶ್ವರಿ ನಗರ(ಆರ್.ಆರ್ ನಗರ) ಹಾಗೂ ಶಿರಾ ಕ್ಷೇತ್ರಗಳ ಉಪ ಚುನಾವಣೆ ದಿನಾಂಕ ಘೋಷಣೆ ಮಾಡಿದೆ.
ಆರ್‍ಆರ್ ನಗರ, ಶಿರಾ ಕ್ಷೇತ್ರಗಳಿಗೆ ನವೆಂಬರ್ 3ರಂದು ಉಪಚುನಾವಣೆ ನಡೆಯಲಿದ್ದು, ನವೆಂಬರ್ 10ರಂದು ಫಲಿತಾಂಶ ಹೊರ ಬೀಳಲಿದೆ. ಅಕ್ಟೋಬರ್ 9ರಂದು ಚುನಾವಣಾ ಅಧಿಸೂಚನೆ ಪ್ರಕಟವಾಗಲಿದ್ದು, ಅಂದಿನಿಂದಲೇ ನಾಮಪತ್ರಗಳ ಸಲ್ಲಿಕೆ ಕಾರ್ಯ ಆರಂಭವಾಗಲಿದೆ. ಅಕ್ಟೋಬರ್ 16 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದರೆ, ಅಕ್ಟೋಬರ್ 19 ನಾಮಪತ್ರ ವಾಪಸ್‍ಗೆ ಕೊನೆಯ ದಿನವಾಗಿದೆ.
ಶಿರಾ ಶಾಸಕರಾಗಿ ಜೆಡಿಎಸ್‍ನಿಂದ ಆಯ್ಕೆಯಾಗಿದ್ದ ಬಿ.ಸತ್ಯನಾರಾಯಣ ಹೆಮ್ಮಾರಿ ಕೊರೊನಾಗೆ ಬಲಿಯಾಗಿದ್ದಾರೆ. ಅವರ ನಿಧನದಿಂದ ತೆರವಾಗಿರುವ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುತ್ತಿದೆ.
ಆರ್.ಆರ್ ನಗರ ಕ್ಷೇತ್ರದಿಂದ ಕಾಂಗ್ರೆಸ್ ಶಾಸಕರಾಗಿ ನಿರ್ಮಾಪಕರೂ ಆದ ಮುನಿರತ್ನ ಆಯ್ಕೆಯಾಗಿದ್ದರು. ಆಪರೇಶನ್ ಕಮಲಕ್ಕೆ ಒಳಗಾದ ಮುನಿರತ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾದರು. ಆದರೆ, ಮುನಿರತ್ನ ವಿರುದ್ಧ ಬಿಜೆಪಿ ಪರಾಜಿತ ಅಭ್ಯರ್ಥಿ ತುಳಸಿ ಮುನಿರಾಜುಗೌಡ ಹೈಕೋರ್ಟ್‍ನಲ್ಲಿ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು. ಹೀಗಾಗಿ ಕಳೆದ ವರ್ಷದ ಡಿಸೆಂಬರ್‍ನಲ್ಲಿ 15 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದರೂ ಆರ್.ಆರ್ ನಗರ ಕ್ಷೇತ್ರಕ್ಕೆ ನಡೆಯಲಿಲ್ಲ. ಬಳಿಕ ಬಿಜೆಪಿ ಪರಾಜಿತ ಅಭ್ಯರ್ಥಿ ತುಳಸಿ ಮುನಿರಾಜುಗೌಡ ತಕರಾರು ಅರ್ಜಿಯನ್ನು ವಾಪಸ್ ಪಡೆದರು. ಈ ಹಿನ್ನೆಲೆಯಲ್ಲಿ ಹೈಕೋರ್ಟ್‍ನಲ್ಲಿ ಉಪಚುನಾವಣೆಗೆ ಇದ್ದ ಅಡ್ಡಿ ನಿವಾರಣೆಯಾಗಿತ್ತು. ಆದರೆ, ಕೊರೊನಾ, ಲಾಕ್‍ಡೌನ್ ಹಿನ್ನೆಲೆಯಲ್ಲಿ ಆರ್.ಆರ್ ನಗರ ಕ್ಷೇತ್ರಕ್ಕೆ ಉಪ ಚುನಾವಣೆ ನಿಗಧಿಯಾಗಿರಲಿಲ್ಲ.
ನಿನ್ನೆಯಷ್ಟೇ ಮಸ್ಕಿ ಕ್ಷೇತ್ರದ ಉಪಚುನಾವಣೆಗೆ ಇದ್ದ ಅಡ್ಡಿಯೂ ನಿವಾರಣೆಯಾಗಿದೆ. ಬಿಜೆಪಿ ಆಪರೇಶನ್ ಕಮಲಕ್ಕೆ ಒಳಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಪ್ರತಾಪ್‍ಗೌಡ ಪಾಟೀಲ್ ವಿರುದ್ಧ ಹೈಕೋರ್ಟ್‍ನಲ್ಲಿ ದೂರು ದಾಖಲಾಗಿತ್ತು. ಸುದೀರ್ಘ ವಿಚಾರಣೆ ನಡೆಸಿದ್ದ ಹೈಕೋರ್ಟ್, ತಕರಾರು ಅರ್ಜಿಯನ್ನು ನಿನ್ನೆ ವಜಾಗೊಳಿಸಿದೆ.
ಆದರೆ, ಚುನಾವಣಾ ಆಯೋಗ ಮಸ್ಕಿ ಕ್ಷೇತ್ರದ ಉಪಚುನಾವಣೆಗೆ ಇನ್ನೂ ದಿನಾಂಕ ಪ್ರಕಟಿಸಿಲ್ಲ. ಈ ವಾರ ಅಥವಾ ಮುಂದಿನ ವಾರ ಮಸ್ಕಿ ಉಪಚುನಾವಣೆಗೆ ದಿನಾಂಕ ಪ್ರಕಟವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.








