ದರ್ಪ, ದುರಹಂಕಾರಗಳೇ ಇವರನ್ನು ಮುಳುಗಿಸುತ್ತಿದೆ : ಬಿಜೆಪಿ ವಿರುದ್ಧ “ಕೈ” ಕಿಡಿ
ಬೆಂಗಳೂರು : ರಾಜ್ಯದಲ್ಲಿ ಗುಸು ಗುಸು ವಿಡಿಯೋ ಸ್ಫೋಟವಾಗಿದೆ. ತುಮಕೂರಿನಲ್ಲಿ ಸಂಸದ ಜಿ.ಎಸ್. ಬಸವರಾಜು ಮತ್ತು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಅವರು ಗುಸುಗುಸು ಮಾತನಾಡಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಈ ಕುರಿತಂತೆ ಟ್ವಿಟ್ಟರ್ ನಲ್ಲಿ ರಾಜ್ಯ ಕಾಂಗ್ರೆಸ್ ಬಿಜೆಪಿಯ ಕಾಲೆಳೆದಿದೆ.
ಕಾಂಗ್ರೆಸ್ ತನ್ನ ಟ್ವೀಟ್ ನಲ್ಲಿ.. ತಮ್ಮ ಪಕ್ಷ ಗೆಲ್ಲುವುದಿಲ್ಲವೆಂದು ಬಿಜೆಪಿ ನಾಯಕರಿಗೆ ಮನವರಿಕೆಯಾಗಿ ಹೋಗಿದೆ, ತಮ್ಮದೇ ಸಚಿವರ ದುರ್ವರ್ತನೆ, ನಿಷ್ಕ್ರಿಯತೆಯನ್ನು ಒಪ್ಪಿಕೊಳ್ಳುತ್ತ ಹತಾಶರಾಗಿದ್ದಾರೆ,
ಬಿಜೆಪಿ ಪಕ್ಷ ಮುಳುಗುತ್ತಿರುವ ಹಡಗು ಎಂಬುದಕ್ಕೆ ಇದಕ್ಕಿಂತ ಪುರಾವೆ ಬೇಕಾಗಿಯೇ ಇಲ್ಲ, ಇವರ ದರ್ಪ, ದುರಹಂಕಾರಗಳೇ ಇವರನ್ನು ಮುಳುಗಿಸುತ್ತಿದೆ ಎಂದು ಕಿಡಿಕಾರಿದೆ.
ಏನಿದು ಘಟನೆ
ತುಮಕೂರು ನಗರದಲ್ಲಿ ಇಂದು ಸ್ಮಾರ್ಟ್‌ಸಿಟಿ, ಮಹಾನಗರ ಪಾಲಿಕೆ ಹಾಗೂ ನಗರಾಭಿವೃದ್ಧಿ ಇಲಾಖೆ ವತಿಯಿಂದ ವಿವಿಧ ನೂತನ ಕಟ್ಟಡಗಳ ಲೋಕಾರ್ಪಣೆ ಸಮಾರಂಭ ಏರ್ಪಡಿಸಲಾಗಿತ್ತು. ಇದಕ್ಕು ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಅಕ್ಕಪಕ್ಕ ಕುಳಿತಿದ್ದ ಸಂಸದ ಜಿ.ಎಸ್. ಬಸವರಾಜು ಮತ್ತು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು, ಈ ನನ್ ಮಗ ನಮ್ ಮಂತ್ರಿ ಹೇಂಗೆ ಗೊತ್ತಾ..? ದಕ್ಷಿಣಾ ಕೋರಿಯಾದ ಕಿಂಗ್ ಪಿನ್ ಇದಾನಲ್ಲ ಅವನಂತೆ ಕೆಟ್ಟ ನನ್ಮಗ. ಇವನಿಂದ ಜಿಲ್ಲೆಯಲ್ಲಿ ಒಂದು ಸೀಟೂ ಬರೋಲ್ಲ. ಹಾಳು ಮಾಡಿ ಬಿಟ್ಟಿದ್ದಾನೆ ನಮ್ಮ ಜಿಲ್ಲೆಯಲ್ಲ ಮಾತು ಎತ್ತಿದ್ರೆ ಹೊಡಿ, ಬಡಿ ಅಂತಾನೆ.. ಎಂದು ಗುಸು ಗುಸು ಮಾತನಾಡಿರುವ ವಿಡಿಯೋ ವೈರಲ್ ಆಗುವ ಮೂಲಕ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಸಭೆಗಳಲ್ಲಿ ಎಕ್ಸಿಕ್ಯೂಟಿವ್ ಎಂಜಿನಿಯರ್‌ಗೆ ಹೆಂಡ್ತಿ ಸೀರೆ ಒಗೆಯಲು ಲಾಯಕ್ ನೀನು ಅಂತ ಮಿನಿಸ್ಟರ್ ಹೇಳುತ್ತಾನೆ. ಒಂದು ಹ್ಯಾಂಡ್ ಬಿಲ್ ಫ್ರಿಂಟ್ ಮಾಡಿಸಲ್ಲ. ಮೊನ್ನೆ ಸಾವಿರ ಕೋಟಿ ಅನುದಾನ ಮಂಜೂರು ಮಾಡಿಸಿಕೊಂಡು ಬಂದವ್ನೆ, ನಮಗೆ ಯಾರಿಗೂ ಇನ್ವಿಟೇಷನ್ ಇಲ್ಲ, ಕರೆಯೋದು ಇಲ್ಲ ಎಂದು ಹೆಸರೇಳದೇ ಸಚಿವ ಮಾಧುಸ್ವಾಮಿ ವಿರುದ್ಧ ಸಂಸದರು ಚಾಡಿ ಹೇಳಿದ್ದಾರೆ.