ಸಿಎಂ ರೇಸ್ ಗೆ ಹೋಗಿ ಸ್ಲೈಡಿಂಗ್ ಆಗೋದು ಬೇಡ : ಅಶೋಕ್
ಹಾಸನ : ಬಿ.ಎಸ್.ಯಡಿಯೂರಪ್ಪ ಅವರ ನಂತರ ಮುಂದಿನ ಸಿಎಂ ಯಾರು ಎಂಬ ಚರ್ಚೆ ರಾಜ್ಯದಲ್ಲಿ ಶುರುವಾಗಿದೆ. ಸಿಎಂ ರೇಸ್ ನಲ್ಲಿ ಒಂದಿಷ್ಟು ಮಂದಿಯ ಹೆಸರುಗಳು ಕೇಳಿಬರುತ್ತಿವೆ.
ಈ ಮಧ್ಯೆ ಸಿಎಂ ರೇಸ್ ಬಗ್ಗೆ ಆರ್.ಅಶೋಕ್ ಪ್ರತಿಕ್ರಿಯೆ ನೀಡಿ, ಸಿಎಂ ರೇಸ್ ಗೆ ಹೋಗಿ ನಾನು ಸ್ಲೈಡಿಂಗ್ ಆಗೋದು ಬೇಡ ಎನ್ನುವ ಮೂಲಕ ನಾನು ಸಿಎಂ ರೇಸ್ ನಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಹಾಸನದ ಸಕಲೇಶಪುರದಲ್ಲಿ ಮುಂದಿನ ಸಿಎಂ ವಿಚಾರವಾಗಿ ಮಾತನಾಡಿದ ಅವರು, ರಾಜ್ಯದಲ್ಲಿ ಮಳೆಗಾಲ ಪ್ರಾರಂಭವಾಗಿದೆ. ಮೊದಲು ಜನರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಬೇಕಾಗಿದೆ.
ಯಡಿಯೂರಪ್ಪ ಅವರನ್ನೇ ಮುಂದುವರಿಸುವಂತೆ ಸ್ವಾಮೀಜಿಗಳು ಒತ್ತಡ ಹೇರಿದ್ದಾರೆ. ಸ್ವಾಮೀಜಿಗಳ ಬಗ್ಗೆ ನಮಗೆ ಗೌರವವಿದೆ. ಆದ್ರೆ ಸಿಎಂ ಬದಲಾವಣೆ ವಿಚಾರವಾಗಿ ನಾಯಕರು ತೀರ್ಮಾನ ಮಾಡುತ್ತಾರೆ. ಸದ್ಯಕ್ಕೆ ಯಡಿಯೂರಪ್ಪ ಅವರೇ ಮುಂದುವರಿಯುತ್ತಾರೆ ಎಂದು ತಿಳಿಸಿದರು.
ಇನ್ನು ಸಿಎಂ ವಿಚಾರವಾಗಿ ಕೇಂದ್ರದಲ್ಲಿ ಪಕ್ಷದ ನಾಯಕರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೆ, ಅದರಂತೆ ನಾವು ನಡೆಯುತ್ತೇವೆ. ಇದರ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ ಎಂದು ಆರ್ ಅಶೋಕ್ ಹೇಳಿದರು.