ಚಾಮರಾಜನಗರ: ಸಿ.ಪಿ. ಯೋಗೇಶ್ವರ್ (CP Yogeshwar) ಅವರ ಭಾವ ಹಾಗೂ ಉದ್ಯಮಿಯಾಗಿರುವ ಮಹದೇವಯ್ಯ (Mahadevaiah) ಅವರನ್ನು ಸುಪಾರಿ ಕೊಟ್ಟು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗುತ್ತಿದೆ.
ಸದ್ಯ ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ. ಅಲ್ಲದೇ, ಮಹದೇವಯ್ಯ ಹತ್ಯೆಯಾಗಿರುವುದು ಬಹುತೇಕ ಖಚಿತ ಎಂದು ಮೂಲಗಳು ಹೇಳುತ್ತಿವೆ. ಮೂವರು ದುಷ್ಕರ್ಮಿಗಳ ತಂಡದಿಂದ ಮಹದೇವಯ್ಯ ಕೊಲೆಯಾಗಿರಬಹುದು ಎಂದು ಶಂಕಿಸಲಾಗಿದ್ದು, ಕೃತ್ಯಕ್ಕೆ ಸಂಬಂಧಿಸಿದ ಸಿಸಿ ಕ್ಯಾಮರಾ ದೃಶ್ಯ ವಶಕ್ಕೆ ಪಡೆಯಲಾಗಿದೆ.
ಮಹದೇವಯ್ಯ ಅವರು ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದರು. ಹನೂರು ತಾಲೂಕಿನ ರಾಮಾಪುರದಲ್ಲಿ ಕಾರು ಭಾನುವಾರ ರಾತ್ರಿ ಪತ್ತೆಯಾಗಿತ್ತು. ವಿಷಯ ತಿಳಿಯುತ್ತಿದ್ದಂತೆಯೇ ರಾಮನಗರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದರು. ಪರಿಶೀಲನೆ ಸಂದರ್ಭ ಕಾರಿನಲ್ಲಿ ರಕ್ತದ ಕಲೆ ಪತ್ತೆಯಾಗಿತ್ತು.