ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಅಧಿಸೂಚನೆ ಹೊರಡಿಸಿದೆ. ಹೀಗಾಗಿ ಹಲವೆಡೆ ಭದ್ರತೆ ಕಲ್ಪಿಸಲಾಗಿದೆ.
2019ರಲ್ಲಿ ಸಂಸತ್ತಿನಲ್ಲಿ ಸಿಎಎ ಕಾಯ್ದೆಗೆ ಅನುಮೋದನೆ ಸಿಕ್ಕರೂ, ಅಧಿಸೂಚನೆ ಹೊರಡಿಸಿರಲಿಲ್ಲ. ಇತ್ತೀಚೆಗೆ ಸಿಎಎ ಜಾರಿಗೊಳಿಸುವುದಾಗಿ ಅಮಿತ್ ಶಾ ಪುನರುಚ್ಚರಿಸಿದ್ದರು. ಅದರಂತೆ ಸದ್ಯ ಲೋಕಸಭಾ ಚುನಾವಣೆ ಹೊಸ್ತಲಿನಲ್ಲಿಯೇ ಸಿಎಎ ಅಧಿಸೂಚನೆ ಹೊರಡಿಸಿದ್ದಾರೆ. 2019ರ ಡಿಸೆಂಬರ್ 11ರಂದು ಸಂಸತ್ನಲ್ಲಿ ಸಿಎಎ ಅಂಗೀಕಾರಗೊಂಡಿತ್ತು. ಇದೀಗ ಸಿಎಎ ಜಾರಿಗೊಳಿಸಿ ಅಧಿಸೂಚನೆ ಹೊರಬಿದ್ದಿದ್ದು, 2014ರ ಡಿ.31ಕ್ಕೂ ಮುನ್ನ ಭಾರತಕ್ಕೆ ಆಗಮಿಸಿದವರಿಗೆ ನಿಯಮ ಅನ್ವಯವಾಗುತ್ತದೆ. ಹಿಂದೆ 11 ವರ್ಷ ಭಾರತದಲ್ಲೇ ನೆಲೆಸಿದವರಿಗೆ ಅವಕಾಶವಿತ್ತು. ಈಗ ತಿದ್ದುಪಡಿ ಮಾಡಿ 11 ವರ್ಷದಿಂದ ಈಗ 5 ವರ್ಷಕ್ಕೆ ಇಳಿಸಲಾಗಿದ್ದು, ಮುಸ್ಲಿಮೇತರ ವ್ಯಕ್ತಿಗಳು 6 ವರ್ಷ ಕಾಲ ಅಥವಾ ಅದಕ್ಕೂ ಮೇಲ್ಪಟ್ಟು ಭಾರತದಲ್ಲೇ ವಾಸ ಮಾಡಿದ್ದರೆ ಅಂಥವರಿಗೆ ಪೌರತ್ವ ನೀಡಲಾಗುತ್ತದೆ. ಕ್ರಿಶ್ಚಿಯನ್, ಸಿಖ್, ಬೌದ್ಧ, ಜೈನ್, ಪಾರ್ಸಿಗಳಿಗೆ ಪೌರತ್ವ ನೀಡಲು ಅನುಮತಿ ನೀಡಲಾಗಿದೆ.
ಈ ಕಾಯ್ದೆಯಡಿ ಬಾಂಗ್ಲಾದೇಶ, ಪಾಕಿಸ್ತಾನ, ಆಫ್ಗಾನಿಸ್ತಾನದಿಂದ ಭಾರತಕ್ಕೆ 2014ರ ಡಿಸೆಂಬರ್ 31ಕ್ಕಿಂತ ಮೊದಲು ಆಗಮಿಸಿ ನೆಲೆಸಿದವರಿಗೆ ಭಾರತದ ಪೌರತ್ವ ನೀಡುವ ವಿಷಯವಾಗಿದೆ. ಹಿಂದೂಗಳು, ಸಿಖ್ಖರು, ಜೈನರು, ಬೌದ್ಧರು, ಪಾರ್ಸಿಗಳು ಹಾಗೂ ಕ್ರಿಶ್ಚಿಯನ್ನ ಈ ಮೂರು ದೇಶಗಳಲ್ಲಿ ನಡೆದ ನರಮೇಧ, ದೌರ್ಜನ್ಯಗಳಿಂದ ತಪ್ಪಿಸಿಕೊಂಡು ಭಾರತಕ್ಕೆ ಬಂದು ನೆಲೆಸಿದವರಿಗೆ ಪೌರತ್ವ ನೀಡುವ ಕುರಿತು ಕಾಯ್ದೆ ತಿಳಿಸುತ್ತದೆ.