CAA : ಸಿಎಎ ವಿರೋಧಿ ಹೋರಾಟಗಾರನ ನಿಗೂಢ ಸಾವು ಖಂಡಿಸಿ ಬೃಹತ್ ಪ್ರತಿಭಟನೆಗೆ ತಯಾರಿ…
ಪಶ್ಚಿಮ ಬಂಗಾಳ : ದೇಶಾದ್ಯಂತ ಕೋವಿಡ್ ಗೂ ಮುಂಚೆ ದೊಡ್ಡ ಹಲ್ ಚಲ್ ಹೆಬ್ಬಿಸಿ ಪ್ರತಿಭಟನೆಗಳು , ಹಿಂಸಾಚಾರಕ್ಕೆ ನಾಂದಿ ಹಾಡಿದ್ದ ವಿವಾದಾತ್ಮಕ ಕಾಯ್ದೆ ಸಿಎಎ ವಿರೋಧಿ ಹೋರಾಟಗಾರ ಹಾಗೂ ವಿದ್ಯಾರ್ಥಿ ಮುಖಂಡ , ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ಅನೀಶ್ ಖಾನ್ ನಿಗೂಡವಾಗಿ ಸಾವನಪ್ಪಿದ್ದಾರೆ.
ಅನೀಶ್ ಸಾವು ಖಂಡಿಸಿ ಸಿಪಿಎಂನ ವಿದ್ಯಾರ್ಥಿ ಘಟಕ ಎಸ್ ಎಫ್ ಐ ಪಶ್ಚಿಮ ಬಂಗಾಳದಾತ್ಯಂತ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಶುಕ್ರವಾರ ರಾತ್ರಿ ಅಮಟಾದಲ್ಲಿನ ತಮ್ಮ ನಿವಾಸಕ್ಕೆ ಪೊಲೀಸ್ ಸಮವಸ್ತ್ರದಲ್ಲಿ ಕೆಲವರು ಒಳನುಗ್ಗಿ ಅನೀಶ್ ಅವರನ್ನು ಮಹಡಿಗೆ ಎಳೆದೊಯ್ದು ಅಲ್ಲಿಂದ ಕೆಳಕ್ಕೆ ತಳ್ಳಿ ಹತ್ಯೆ ಮಾಡಿದ್ದಾರೆ ಎಂದು ಅವರ ಕುಟುಂಬ ಆರೋಪಿಸಿದೆ.
ಆದರೆ ಪೊಲೀಸರು ಈ ಆರೋಪವನ್ನು ತಳ್ಳಿ ಹಾಕಿದ್ದಾರೆ. ಆಡಳಿತಾರೂಢ ಟಿಎಂಸಿಯ ಮುಖಂಡರೊಬ್ಬರು ಹತ್ಯೆಗೆ ಸಂಚು ರೂಪಿಸಿರುವುದಾಗಿ ಆರೋಪಿಸಿ ಕಾಂಗ್ರೆಸ್, ಸಿಪಿಎಂ ಮತ್ತು ಬಿಜೆಪಿ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಿವೆ.
ಆದರೆ ಟಿಎಂಸಿ ಈ ಆರೋಪ ನಿರಾಕರಿಸಿದ್ದು ಪಿತೂರಿಯನ್ನು ವ್ಯವಸ್ಥಿತವಾಗಿ ರಾಜ್ಯದ ಹೊರಗೆ ರೂಪಿಸಿರಬಹುದು ಎಂದು ಹೇಳಿದೆ. ಅನೀಶ್ ಕುಟುಂಬ ಮತ್ತು ಅಲಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಸಹಕಾರದಿಂದ ಸ್ಟೂಡೆಂಟ್ಸ್ ಫೆಡರೇಷನ್ ಆಫ್ ಇಂಡಿಯಾ ರಾಜ್ಯದಾದ್ಯಂತ ಸೋಮವಾರ ಪ್ರತಿಭಟನೆ ನಡೆಸಲು ನಿರ್ಧರಿಸಿದೆ ಎಂದು SFI ರಾಜ್ಯ ಸಮಿತಿ ಸದಸ್ಯ ಭಾಜಿತ್ ಸರ್ಕಾರ್ ತಿಳಿಸಿದ್ದಾರೆ.