ಬೆಳಗಾವಿ: ಗೋಕಾಕ್ ನಗರ ಮತ್ತು ಸುತ್ತ ಮುತ್ತಲಿನ ಹಳ್ಳಿಗಳ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸುವ ಗಟ್ಟಿ ಬಸವಣ್ಣ ಯೋಜನೆ ಅನುಷ್ಠಾನಕ್ಕೆ ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
995 ಕೋಟಿ ರೂ. ವೆಚ್ಚದಲ್ಲಿ ಮಾರ್ಕಂಡೇಯ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸಿ, ಗೋಕಾಕ್ ತಾಲ್ಲೂಕಿನ ಜನರಿಗೆ ಕುಡಿಯುವ ನೀರು ಒದಗಿಸುವ ಸಚಿವ ರಮೇಶ್ ಜಾರಕಿಹೊಳಿ ಅವರ ಕನಸಿನ ಯೋಜನೆ ಅನುಷ್ಠಾನಕ್ಕೆ ಇಂದು ನಡೆದ ಸಚಿವ ಸಂಪುಟದ ಸಭೆ, ಅನುಮತಿ ನೀಡಿದೆ.
ಗೋಕಾಕ್ ತಾಲ್ಲೂಕಿನ ಸುತ್ತಮುತ್ತ ಅಂತರ್ಜಲ ಮಟ್ಟ ತೀವ್ರ ಕುಸಿದಿರುವ ಹಿನ್ನೆಲೆಯಲ್ಲಿ ಗಟ್ಟಿ ಬಸವಣ್ಣ ಯೋಜನೆ ಅನುಷ್ಠಾನದಿಂದ ಗೋಕಾಕ್ ಸುತ್ತಲಿನ ಜನರಿಗೆ ಕುಡಿಯುವ ನೀರು ಒದಗಲಿದೆ.
ಇದರ ಜೊತೆಗೆ ಬಿಜೆಪಿಯ ಬೆಳಗಾವಿ ಜಿಲ್ಲಾ ಕಚೇರಿ ನಿರ್ಮಾಣಕ್ಕಾಗಿ 30ಗುಂಟೆ ಜಾಗವನ್ನು ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ನೀಡಲು ಇಂದು ನಡೆದ ರಾಜ್ಯ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಜಲಸಂಪನ್ಮೂಲ ಇಲಾಖೆಯ ಸಚಿವ ರಮೇಶ್ ಜಾರಕಿಹೊಳಿ ಅವರ ಸತತ ಪ್ರಯತ್ನದ ಫಲವಾಗಿ ನಗರಾಭಿವೃದ್ಧಿ ಇಲಾಖೆಯ ಪ್ರಸ್ತಾಪವನ್ನು ಸಚಿವ ಸಂಪುಟ ಒಪ್ಪಿ ಅನುಮೋದನೆ ನೀಡಿದೆ.
ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಬಿಜೆಪಿಯ ಸ್ವಂತ ಕಟ್ಟಡ ಇರಬೇಕು ಎಂಬ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಸೂಚನೆಯಂತೆ ಸಚಿವ ಸಂಪುಟದಲ್ಲಿ ಈ ವಿಷಯ ಪ್ರಸ್ತಾಪಿಸಿದ ಸಚಿವ ರಮೇಶ್ ಜಾರಕಿಹೊಳಿ, ಮುಖ್ಯಮಂತ್ರಿಗಳು ಮತ್ತು ಇತರ ಸಚಿವರೊಂದಿಗೆ ಚರ್ಚಿಸಿ ಈ 30 ಗುಂಟೆ ಜಾಗವನ್ನು ಬಿಜೆಪಿ ಕಟ್ಟಡ ನಿರ್ಮಾಣಕ್ಕೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಬೆಳಗಾವಿ ಬಿಜೆಪಿ ಘಟಕ ತಿಳಿಸಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel