ಬೆಂಗಳೂರು: ಕಳೆದ ಮೂರು ದಿನಗಳ ಕಾಲ ರಾಷ್ಟ್ರ ರಾಜಧಾನಿ ದೆಹಲಿ ಪ್ರವಾಸ ಮಾಡಿ ಇಂದು ಬೆಂಗಳೂರಿಗೆ ವಾಪಸಾಗಿರುವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಬರಿಗೈಲಿ ಬಂದ್ರಾ ಎಂಬ ಚರ್ಚೆ ರಾಜ್ಯ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.
ಸಂಪುಟ ವಿಸ್ತರಣೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಕ್ಷದ ವರಿಷ್ಠರು ಸಮ್ಮತಿಸಿದ್ದಾರೆ ಎಂದು ನಿನ್ನೆ ಖುಷಿಯಲ್ಲಿದ್ದ ಯಡಿಯೂರಪ್ಪ ಅವರ ಮುಖದಲ್ಲಿ ಇಂದು ಲವಲವಿಕೆ ಕಂಡು ಬಂದಿಲ್ಲ.

ವಿಮಾನನಿಲ್ದಾಣದಿಂದ ನೇರವಾಗಿ ಅಧಿಕೃತ ನಿವಾಸ ಕಾವೇರಿಗೆ ಆಗಮಿಸಿದ ಯಡಿಯೂರಪ್ಪ, ತಮ್ಮ ಮೂರು ದಿನಗಳ ದೆಹಲಿ ಪ್ರವಾಸ ಯಶಸ್ವಿಯಾಗಿದೆ ಎಂದು ಪುನರುಚ್ಛರಿಸಿದ್ದಾರೆ. ಆದರೆ, ಸಂಪುಟ ವಿಸ್ತರಣೆ ಯಾವಾಗ ಎಂಬ ಪ್ರಶ್ನೆಗೆ ಅವರ ಬಳಿ ಸ್ಪಷ್ಟ ಉತ್ತರ ಇರಲಿಲ್ಲ.
ಸೋಮವಾರದಿಂದ ರಾಜ್ಯ ವಿಧಾನಮಂಡಲ ಅಧಿವೇಶನ ಆರಂಭವಾಗುತ್ತಿದೆ. ಅದಕ್ಕೂ ಮುನ್ನ ಅಂದರೆ, ಇಂದು ಅಥವಾ ನಾಳೆ ಸಂಪುಟ ವಿಸ್ತರಣೆ ಮಾಡಿ ಪ್ರತಿಪಕ್ಷಗಳ ವಿರುದ್ಧ ಅಖಾಡಕ್ಕಿಳಿಯಲು ಬಿಎಸ್‍ವೈ ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ಸಂಪುಟ ವಿಸ್ತರಣೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ಸಿಗುವುದು ಕಷ್ಟ ಎಂಬ ಸುದ್ದಿ ಬಿಜೆಪಿ ಪಾಳಯದಲ್ಲಿ ಕೇಳಿ ಬರುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಸಂಸತ್ ಅಧಿವೇಶನದಲ್ಲಿ ಬ್ಯುಸಿಯಾಗಿದ್ದಾರೆ. ಅಮಿತ್ ಶಾ ಎರಡು ದಿನಗಳ ಹಿಂದಷ್ಟೇ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ. ಹೀಗಾಗಿ ಈ ಇಬ್ಬರೂ ನಾಯಕರ ಜತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಮಾತುಕತೆ ನಡೆಸಿ ಒಪ್ಪಿಗೆ ಪಡೆಯುವುದು ವಿಳಂಬವಾಗುವ ಸಾಧ್ಯತೆ ಇದೆ. ಹೀಗಾಗಿ ಅಧಿವೇಶನ ನಂತರ ಅಥವಾ ಅಕ್ಟೋಬರ್ ಮೊದಲ ವಾರದಲ್ಲಿ ಸಂಪುಟ ವಿಸ್ತರಣೆ ಅಥವಾ ಪುನಾರಚನೆಗೆ ಬಿಜೆಪಿ ವರಿಷ್ಠರು ಒಪ್ಪಿಗೆ ನೀಡುವ ಸಾಧ್ಯತೆ ಇದೆ.
ಹೀಗಾಗಿಯೇ ದೆಹಲಿಯ ವರಿಷ್ಠರ ನಿರ್ಧಾರಕ್ಕೆ ಕಾಯುತ್ತಿದ್ದೇನೆ. ಅವರು ಯಾವಾಗ ಒಪ್ಪಿಗೆ ಕೊಡುತ್ತಾರೋ ಆಗ ಸಂಪುಟ ವಿಸ್ತರಣೆ ಆಗಲಿದೆ ಎಂದಷ್ಟೇ ಯಡಿಯೂರಪ್ಪ ಹೇಳಿದ್ದಾರೆ. ಯಡಿಯೂರಪ್ಪ ಅವರ ಮಾತಿನ ಧಾಟಿಯಲ್ಲಿಯೇ ಹೇಳುವುದಾದರೆ ಸದ್ಯಕ್ಕೆ ಸಂಪುಟ ವಿಸ್ತರಣೆ ಆಗುವುದು ಆನುಮಾನ ಎನ್ನಲಾಗತ್ತಿದೆ.








