ಮಾರ್ಚ್ 26ಕ್ಕೆ ಕರ್ನಾಟಕ ಬಂದ್ ಗೆ ಕರೆ
ಬೆಂಗಳೂರು : ಕೇಂದ್ರ ಸರ್ಕಾರದ ಕೃಷಿ ಕಾನೂನುಗಳನ್ನ ವಿರೋಧಿಸಿ ರೈತರು, ಕಾರ್ಮಿಕತು ಮತ್ತು ದಲಿತ ಸಂಘಟನೆಗಳು ಮಾರ್ಚ್ 26 ರಂದು ಕರ್ನಾಟಕ ಬಂದ್ ಗೆ ಕರೆ ನೀಡಿವೆ. ಜೊತೆಗೆ ರಾಜ್ಯದಲ್ಲಿ ಉಪಚುನಾವಣೆಗಳು ಮುಗಿದ ಬಳಿಕ ಮೇ ತಿಂಗಳಲ್ಲಿ ಉತ್ತರ ಕರ್ನಾಟಕದಲ್ಲಿ ರೈತ ಮಹಾಪಂಚಾಯತ್ ನಡೆಸುವುದಾಗಿ ತಿಳಿಸಿವೆ.
ಸೋಮವಾರ ರೈತ ನಾಯಕರ ಸಮ್ಮುಖದಲ್ಲಿ ಸಹಸ್ರಾರು ರೈತರು, ಕಾರ್ಮಿಕರು ಮತ್ತು ದಲಿತ ಸಂಘಟನೆಗಳು ಬೆಂಗಳೂರು ಚಲೋ ನಡೆಸಿದರು. ಬಳಿಕ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿದರು. ಈ ಹಿನ್ನೆಲೆ ಕೃಷಿ ಬಿ.ಸಿ.ಪಾಟೀಲರು ಪ್ರತಿಭಟನಾಸ್ಥಳಕ್ಕೆ ಭೇಟಿ ನೀಡಿದರು. ಈ ವೇಳೆ ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ತಿದ್ದುಪಡಿ ರದ್ದು ಮಾಡುವುದು ಸೇರಿದಂತೆ 23 ಬೇಡಿಕೆಗಳ ರೈತರ ಹಕ್ಕೊತ್ತಾಯ ಮನವಿಯನ್ನು ರಾಜ್ಯ ಕೃಷಿ ಸಚಿವ ಬಿ.ಸಿ ಪಾಟೀಲ್ ಸ್ವೀಕರಿಸಿದರು.
ಬಳಿಕ ಮಾತನಾಡಿದ ಅವರು, ಸಿಎಂ ಆದೇಶದಂತೆ ಮನವಿ ಸ್ವೀಕರಿಸಿದ್ದೇನೆ. ಎಲ್ಲರೊಂದಿಗೆ ಚರ್ಚಿಸಿ, ನಿರ್ಧಾರ ತೆಗೆದುಕೊಳ್ಳಲು ತಿಳಿಸುತ್ತೇವೆ ಎಂದರು.
ಪ್ರತಿಭಟನೆ ವೇಳೆ ಮಾತನಾಡಿದ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ನಮ್ಮನ್ನು ಆಳುವವರು ಹೃದಯಹೀನರು, ಕಿವುಡ, ಮೂಗ, ಅನಾಗರಿಕರಾಗಿದ್ದಾರೆ. ನಮ್ಮ ದೇಶದ ಪ್ರಧಾನಿ ಅನಾಗರಿಕ ಎಂದು ಗುಡುಗಿದರು.