ಬೆಂಗಳೂರು: ಅನ್‍ಲಾಕ್ 3.0 ಪ್ರಕಟವಾದ ನಂತರ ರಾಜ್ಯದಲ್ಲಿ ಜಾರಿಯಲ್ಲಿದ್ದ ಸಂಡೇ ಲಾಕ್‍ಡೌನ್ ಇಂದಿನಿಂದ ರದ್ದು ಮಾಡಲಾಗಿದೆ.
ಇನ್ನು ಮುಂದೆ ಸಂಡೇ ಲಾಕ್‍ಡೌನ್ ಇರುವುದಿಲ್ಲ ಎಂದು ರಾಜ್ಯ ಸರ್ಕಾರ ನಿನ್ನೆಯೇ ತಿಳಿಸಿದ ಹಿನ್ನೆಲೆಯಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ.
ರಾಜಧಾನಿ ಬೆಂಗಳೂರಿನಲ್ಲಿ ಬೆಳಿಗ್ಗೆಯಿಂದಲೇ ಕೆಎಸ್‍ಆರ್‍ಟಿಸಿ ಹಾಗೂ ಬಿಎಂಟಿಸಿ ಬಸ್ ಸಂಚಾರ ಎಂದಿನಂತೆ ಆರಂಭವಾಗಿದೆ. ಆದರೆ, ಕೊರೊನಾ ಭೀತಿ ಹಿನ್ನೆಲೆಯಲ್ಲಿ ಪ್ರಯಾಣಿಕರ ಕೊರತೆ ಕಂಡು ಬರುತ್ತಿದ್ದು ಬಸ್ ನಿಲ್ದಾಣಗಳು ಬಿಕೋ ಎನ್ನುತ್ತಿವೆ.
ಆಟೋ, ಕ್ಯಾಬ್, ಕಾರು ಹಾಗೂ ದ್ವಿಚಕ್ರ ವಾಹನಗಳ ಸಂಚಾರ ಎಂದಿನಂತೆ ಸಾಗಿದೆ. ರಸ್ತೆಗಳಿಗೆ ಹಾಕಿದ್ದ ಬ್ಯಾರಿಕೇಡ್‍ಗಳನ್ನು ಪೊಲೀಸರು ತೆರವುಗೊಳಿಸಿದ್ದಾರೆ. ಆದರೆ, ಕಂಟೈನ್‍ಮೆಂಟ್ ಝೋನ್‍ಗಳಲ್ಲಿ ಮಾತ್ರ ಲಾಕ್‍ಡೌನ್ ಮುಂದುವರೆಸಲಾಗಿದೆ.
ಇಂದು ಸೇರಿದಂತೆ ಮುಂದಿನ ಯಾವ ಭಾನುವಾರಗಳಲ್ಲೂ ಸಂಡೇ ಲಾಕ್‍ಡೌನ್ ಇರುವುದಿಲ್ಲ ಎಂದು ಸರ್ಕಾರ ಹೇಳಿದ ಹಿನ್ನೆಲೆಯಲ್ಲಿ ಅಂಗಡಿ ಮುಂಗಟ್ಟುಗಳು ತೆರೆದಿವೆ.
ಭಾನುವಾರವಾದ್ದರಿಂದ ಮಾಂಸ, ಮೀನು ಹಾಗೂ ಚಿಕನ್ ಖರೀದಿಗೆ ಜನರು ಮುಗಿ ಬಿದ್ದಿದ್ದಾರೆ. ಕೆ.ಆರ್ ಮಾರುಕಟ್ಟೆ, ಕಲಾಸಿಪಾಳ್ಯ ಮಾರುಕಟ್ಟೆ ಹೊರತುಪಡಿಸಿ ಉಳಿದ ಮಾರುಕಟ್ಟೆಗಳಲ್ಲಿ ತರಕಾರಿ, ಹೂವು ಹಾಗೂ ಹಣ್ಣಿನ ವ್ಯಾಪಾರ ಜೋರಾಗಿದೆ.
ಬೆಂಗಳೂರು ಸೇರಿದಂತೆ ರಾಜ್ಯದ ಉಳಿದ ಜಿಲ್ಲೆಗಳಲ್ಲೂ ಜನಜೀವನ ಸಹಜ ಸ್ಥಿತಿಗೆ ಮರಳಿದೆ. ವಾಹನ ಸಂಚಾರ ಎಂದಿನಂತೆ ಸಾಗಿದ್ದು, ಅಂಗಡಿ-ಮುಂಗಟ್ಟು, ಮಾರುಕಟ್ಟೆಗಳಲ್ಲಿ ಅಗತ್ಯ ವಸ್ತುಗಳ ಖರೀದಿ ಸಾಮಾನ್ಯವಾಗಿದೆ.
ಮೈಸೂರು ಮೃಗಾಲಯ ಓಪನ್..
ಸಂಡೇ ಲಾಕ್‍ಡೌನ್ ತೆರವಾದ ಹಿನ್ನೆಲೆಯಲ್ಲಿ ಸಾಂಸ್ಕøತಿಕ ನಗರಿ ಮೈಸೂರಿನ ಕೃಷ್ಣರಾಜೇಂದ್ರ ಮೃಗಾಲಯವನ್ನು ಇಂದೂ ಕೂಡ ತೆರೆಯಲಾಗಿದೆ.
ಕೊರೊನಾ ವೈರಸ್ ಹರಡುವ ಭೀತಿ ಹಿನ್ನೆಲೆಯಲ್ಲಿ ಭಾನುವಾರದಂದು ಮೃಗಾಲಯಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಮಂಗಳವಾರದ ವಾರದ ರಜೆ ಹೊರತುಪಡಿಸಿ ಮುಂದಿನ ಎಲ್ಲಾ ದಿನಗಳಲ್ಲೂ ಮೃಗಾಲಯ ತೆರೆದಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂದಿನಿಂದ ಮಾದಪ್ಪನ ದರ್ಶನ ಅಭಾದಿತ..!
ಚಾಮರಾಜನಗರದ ಇತಿಹಾಸ ಪ್ರಸಿದ್ಧ ಮಲೆ ಮಹದೇಶ್ವರ ದೇವಸ್ಥಾನ ಇಂದಿನಿಂದ ವಾರದ ಎಲ್ಲಾ ದಿನವೂ ತೆರೆಯಲಿದೆ. ವಾರದ ಎಲ್ಲಾ ದಿನವೂ ಭಕ್ತರು ದೇವಸ್ಥಾನಕ್ಕೆ ತೆರಳಿ ಮಾದಪ್ಪನಿಗೆ ಪೂಜೆ ಸಲ್ಲಿಸಬಹುದಾಗಿದೆ.
ಪ್ರತಿ ಸೋಮವಾರದಂದು ಬೆಳಿಗ್ಗೆ 4 ಗಂಟೆ, 10.30 ಹಾಗೂ ಸಂಜೆಗೆ ಮಲೆಮಹದೇಶ್ವರನಿಗೆ ವಿಶೇಷ ಅಭಿಷೇಕ ನಡೆಯಲಿದೆ. ಆದರೆ, ದೇವಾಲಯದ ಒಳಗೆ ಕುಳಿತುಕೊಳ್ಳಲು ಅವಕಾಶ ಇಲ್ಲ. ಹೀಗಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ಭಕ್ತರು ಮಾದಪ್ಪನ ದರ್ಶನ ಪಡೆಯಬಹುದಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.