ದಾವಣಗೆರೆ : ನಾಳೆ ರಾತ್ರಿ 9 ಗಂಟೆಗೆ ಮನೆಯಲ್ಲಿ ದೀಪ ಹಚ್ಚುವಂತೆ ಪ್ರಧಾನಿ ನರೇಂದ್ರ ಮೋದಿ ಕರೆಕೊಟ್ಟಿದ್ದು, ಇದಕ್ಕೆ ಹೆಚ್.ಡಿ ರೇವಣ್ಣ ಆಕ್ಷೇಪ ವ್ಯಕ್ತಪಡಿಸಿದ್ದರು. “ಲಾಕ್ ಡೌನ್ ಇದೆ, ಮೇಣದ ಬತ್ತಿ ತರಲು ಹೋದರೆ ಪೊಲೀಸರು ಲಾಠಿ ಚಾರ್ಜ್ ಮಾಡುತ್ತಾರೆ” ಎಂದು ರೇವಣ್ಣ ಹೇಳಿಕೆ ನೀಡಿದ್ದರು. ಹೀಗಾಗಿ ಮಾಜಿ ಸಚಿವ ಎಚ್.ಡಿ ರೇವಣ್ಣ ಅವರಿಗೆ ದಾವಣಗೆರೆಯ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಕ್ಯಾಂಡಲ್ ಬಾಕ್ಸ್ ಅನ್ನು ಸ್ಪೀಡ್ ಪೋಸ್ಟ್ ಮಾಡುವ ಮೂಲಕ ಟಾಂಗ್ ನೀಡಿದ್ದಾರೆ.
ಈ ಕುರಿತು ದಾವಣಗೆರೆ ದಕ್ಷಿಣ ಯುವಮೋರ್ಚಾ ಅಧ್ಯಕ್ಷ ಶಿವನಗೌಡ ಪಾಟೀಲ್ ಮಾಹಿತಿ ನೀಡಿದ್ದು, “ಪ್ರಧಾನಿ ನರೇಂದ್ರ ಮೋದಿಯವರ ದೀಪ ಪ್ರಜ್ವಲನ ಕರೆಗೆ ಪರೋಕ್ಷವಾಗಿ ಓಗೊಟ್ಟಿರುವ ಎಚ್.ಡಿ ರೇವಣ್ಣ ಅವರಿಗೆ ನಮ್ಮ ಧನ್ಯವಾದಗಳು. ದೇಶ ವ್ಯಾಪಿ ಲಾಕ್ ಡೌನ್ ಇರುವುದರಿಂದ ಮೇಣದ ಬತ್ತಿ ತರಲು ಹೊರಗೆ ಹೋದರೆ ಲಾಠಿ ಚಾಚ್ ಮಾಡುತ್ತಾರೆ ಎಂದು ಅಸಹಾಯಕತೆ ತೋರಿರುವುದು ನಮಗೆ ಗೊತ್ತಾಯಿತು. ಮೋದಿ ಅವರ ಕಾರ್ಯಕ್ರಮ ಯಶಸ್ವಿಗೆ ರೇವಣ್ಣನಂಥವರ ದೈವ ಭಕ್ತರ ಸಹಕಾರವೂ ಅತ್ಯವಶ್ಯಕ. ಅವರ ಅಸಹಾಯಕತೆ ಮನಗಂಡು ಹೊಳೆನರಸೀಪುರ ಮನೆಯ ವಿಳಾಸಕ್ಕೆ ಮೇಣದ ಬತ್ತಿ ಪ್ಯಾಕೆಟ್ ಗಳನ್ನು ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಿಕೊಡುತ್ತಿದ್ದೇವೆ” ಎಂದು ವ್ಯಂಗ್ಯ ಮಾಡಿದ್ದಾರೆ.








