ಕೋರಮಂಗಲದಲ್ಲಿ ಭೀಕರ ಕಾರು ಅಪಘಾತ – ಶಾಸಕನ ಪುತ್ರ , ಭಾವಿ ಪತ್ನಿ ಸೇರಿ 7 ಮಂದಿ ಸಾವು
ಸಿಲಿಕಾನ್ ಸಿಟಿ ಬೆಂಗಳೂರಿನ ಕೋರಮಂಗಲದಲ್ಲಿ ತಡರಾತ್ರಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಹೊಸೂರಿನ ಡಿಎಂಕೆ ಶಾಸಕ ವೈ ಪ್ರಕಾಶ್ ಪುತ್ರ ಕರುಣಾ ಸಾಗರ್, ಭಾವಿ ಸೊಸೆ ಬಿಂದು ಸೇರಿದಂತೆ 7 ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ. ಮಧ್ಯ ರಾತ್ರಿ 1.30ರ ಸುಮಾರಿಗೆ ಕೋರಮಂಗಲದ ಮಂಗಳ ಕಲ್ಯಾಣಮಂಟಪದ ಬಳಿ ಈ ಘಟನೆ ನಡೆದಿದೆ. ಕರುಣಾ ಸಾಗರ್, ಭಾವಿ ಪತ್ನಿ ಬಿಂದು (28), ಇಶಿತಾ (21), ಡಾ.ಧನುಶಾ (21), ಕೇರಳ ಮೂಲದ ಅಕ್ಷಯ್ ಗೋಯೆಲ್ (23), ಹರಿಯಾಣ ಮೂಲದ ಉತ್ಸವ್ (23) ಹುಬ್ಬಳ್ಳಿಯ ರೋಹಿತ್ (23) ಘಟನೆಯಲ್ಲಿ ದಾರುಣವಾಗಿ ಸಾವಿಗೀಡಾಗಿದ್ದಾರೆ.
ಅಪಘಾತಕ್ಕೀಡಾದ ಕಾರು ಕೆಎ 03 ಎಂವೈ 6666 ನಂಬರಿನ ಡೀಸೆಲ್ ಮಾಡೆಲ್ ಕಾರಾಗಿದ್ದು, ಇದು ತಮಿಳುನಾಡಿನ ಸಂಜೀವಿನಿ ಬ್ಲೂ ಮೆಟಲ್ಸ್ ಕಂಪನಿಗೆ ಸೇರಿದ್ದಾಗಿದೆ. 2015ರಲ್ಲಿ ಬೆಂಗಳೂರಿನ ಇಂದಿರಾನಗರದಲ್ಲಿ ನೋಂದಣಿಯಾಗಿದೆ. ಅರುಣಾಸಾಗರ್ ಸ್ನೇಹಿತರ ಜೊತೆ ಕೋರಮಂಗಲದ ಝೋಲೋ ಪಿಜಿಯಲ್ಲಿ ನೆಲೆಸಿದ್ದರು. ಸೋಮವಾರ ರಾತ್ರಿ ಪಾರ್ಟಿ ಮುಗಿಸಿ ಬರುವಾಗ ಅಪಘಾತ ಸಂಭವಿಸಿರಬಹುದು ಎಂಬ ಮಾಹಿತಿ ಸಿಕ್ಕಿದೆ. ವೇಗವಾಗಿ ಬಂದು ಫುಟ್ ಪಾತ್ ಮೇಲಿದ್ದ ಕಂಬಕ್ಕೆ ಕಾರ್ ಡಿಕ್ಕಿ ಹೊಡೆದಿರುವುದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.
ಆಡಿ ಕ್ಯೂ 3 ಕಾರಿನಲ್ಲಿದ್ದ ಮೂವರು ಮಹಿಳೆಯರು ಹಾಗೂ ನಾಲ್ವರು ಪುರುಷರಿದ್ದು, ಎಲ್ಲರೂ ಮೃತಪಟ್ಟಿದ್ದಾರೆ. 6 ಜನ ಸ್ಥಳದಲ್ಲೇ ಮೃತಪಟ್ಟಿದ್ದು, ಓರ್ವ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಪೊಲೀಸರು ಸುಮೊಟೊ ಪ್ರಕರಣ ದಾಖಲಿಸಿಕೊಂಡಿದ್ದು, ಆಡುಗೋಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಇನ್ನೂ ಅತಿವೇಗದ ಚಾಲನೆಯೇ ಈ ಅಪಘಾತಕ್ಕೆ ಕಾರಣ ಎಂದು ಹೇಳಲಾಗ್ತಿದೆ. ಒಂದೇ ಪಿಜಿಯಲ್ಲಿ ವಾಸವಿದ್ದ ಈ 7 ಮಂದಿ ರಾತ್ರಿ ಪಾರ್ಟಿ ಮುಗಿಸಿ ರ್ಯಾಶ್ ಡ್ರೈವಿಂಗ್ ಮಾಡುತ್ತಿದ್ದರು ಎನ್ನಲಾಗಿದೆ.
ಆದರೆ ತಿರುವಿನಲ್ಲಿ ಆಡಿ ಕ್ಯೂ 3 ಕಾರು ನಿಯಂತ್ರಣಕ್ಕೆ ಸಿಗದ ಪರಿಣಾಮ ಡಿವೈಡರ್ಗೆ ಡಿಕ್ಕಿ ಹೊಡೆದಿದೆ. ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ 7 ಮಂದಿಯೂ ಸಾವನ್ನಪ್ಪಿದ್ದಾರೆ. ಅಪಘಾತದ ಭೀಕರ ದೃಶ್ಯ ಸಿ.ಸಿ. ಕ್ಯಾಮರಾದಲ್ಲಿ ಸೆರೆಯಾಗಿದೆ. ಅಪಘಾತದಲ್ಲಿ ಮೃತಪಟ್ಟ ಬಿಂದು, ಕರುಣಾಸಾಗರ್ ಸ್ವಂತ ಮಾವನ ಮಗಳು. ಕರುಣಾ ಸಾಗರ್ ಜೊತೆಯಲ್ಲಿ ಇದ್ದವರೆಲ್ಲ ಅವರ ಸ್ನೇಹಿತರು ಎನ್ನಲಾಗಿದೆ. ಆದರೆ ಇವರೆಲ್ಲ ಯಾರು ಎಂಬ ಪರಿಚಯ ಕರುಣಾ ಸಾಗರ್ ಕುಟುಂಬಸ್ಥರಿಗೆ ಇಲ್ಲ. ಪ್ರತ್ಯಕ್ಷದರ್ಶಿ ಸತೀಶ್ ಎಂಬವರು ಅಪಘಾತ ಸಂಬಂಧ ದೂರು ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.