ಬೆಂಗಳೂರು: ಕಾರೊಂದು ಬೈಕ್ ಗೆ ಡಿಕ್ಕಿ ಹೊಡೆದು ನಂತರ ಫ್ಲೈಓವರ್ (Fly Over) ನಿಂದ ಕೆಳಗೆ ಬಿದ್ದಿರುವ ಭಯಾನಕ ಘಟನೆ ನಡೆದಿದೆ.
ಈ ಘಟನೆ ಬೆಂಗಳೂರಿನ ಯಶವಂತಪುರ ಸರ್ಕಲ್ ನಲ್ಲಿ (Yashwantpur Circle) ನಡೆದಿದೆ. ಪರಿಣಾಮ ಬೈಕ್ ನಲ್ಲಿದ್ದ ಇಬ್ಬರು ಹಾಗೂ 6 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಪೈಕಿ ಮೂವರ ಸ್ಥಿತಿ ಚಿಂತಾಜನಕವಾಗಿದೆ. ಈ ಘಟನೆ ಮಂಗಳವಾರ ಬೆಳಗಿನ ಜಾವ ನಡೆದಿದೆ.
ಸ್ಯಾಂಕಿ ರಸ್ತೆಯಿಂದ ತುಮಕೂರು ರಸ್ತೆ ಮಾರ್ಗವಾಗಿ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಫ್ಲೈಓವರ್ ಮೇಲಿಂದ ಡಿವೈಡರ್ ಗೆ ಹಾರಿ ಎದುರಿಗೆ ಬರುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಫ್ಲೈಓವರ್ ಮೇಲಿನಿಂದ ಕೆಳಗೆ ಬಿದ್ದಿದೆ.
ಕುಡಿದ ಮತ್ತಿನಲ್ಲಿ ಕಾರು ಚಲಾಯಿಸುತ್ತಿದ್ದ ಎಂದು ತಿಳಿದು ಬಂದಿದೆ.
ಚಾಲಕನ ನಿರ್ಲಕ್ಷ್ಯದಿಂದಾಗಿ ಹಾಗೂ ಅತಿ ವೇಗ ಇದಕ್ಕೆ ಕಾರಣ ಎನ್ನಲಾಗಿದೆ. ಕಾರಿನಲ್ಲಿ ಖಾಲಿ ಮದ್ಯ ಬಾಟಲಿಗಳು ಪತ್ತೆಯಾಗಿವೆ. ತಮಿಳುನಾಡು ರಿಜಿಸ್ಟ್ರೇಷನ್ ಹೊಂದಿರುವ ವೊಕ್ಸ್ ವಾಗೇನ್ ವೆಂಟೋ (Volkswagen Vento) TN37DH9484 ಕಾರಿನಲ್ಲಿ 3 ಯುವಕರು ತೆರಳುತ್ತಿದ್ದರು. ಯಶವಂತಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸದ್ಯ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಕುರಿತು ಯಶವಂತಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.