RBI: UPI ಮೂಲಕ ಎಲ್ಲ ಎಟಿಎಂಗಳಲ್ಲಿ ಕಾರ್ಡ್ರಹಿತ ಹಣ ಪಡೆಯಬಹುದು
1 min read
UPI ಮೂಲಕ ಎಲ್ಲ ಎಟಿಎಂಗಳಲ್ಲಿ ಕಾರ್ಡ್ರಹಿತ ಹಣ ಪಡೆಯಬಹುದು
ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ (RBI) ಮಾನಿಟರಿ ಪಾಲಿಸಿ ಕಮಿಟಿ (MPC) ಸಭೆ ಶುಕ್ರವಾರ ನಡೆಯಿತು.
ಸಭೆಯ ನಂತರ ವಿವರಗಳನ್ನು ನೀಡಿದ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಭಾರತದ ಎಲ್ಲ ಎಟಿಎಂಗಳಲ್ಲಿ ಕಾರ್ಡ್ರಹಿತ ಹಣ ಹಿಂಪಡೆಯುವ ಸೌಲಭ್ಯ (Cardless Cash Withdrawal) ಕಲ್ಪಿಸಲಾಗುವುದು.
ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಮೂಲಕ ಈ ಸೌಲಭ್ಯ ಕಲ್ಪಿಸಬಹುದಾಗಿದೆ. ‘ಪ್ರಸ್ತುತ ಕಾರ್ಡ್ರಹಿತ ಹಣ ಹಿಂಪಡೆಯುವ ಸೌಲಭ್ಯವು ಕೆಲವೇ ಬ್ಯಾಂಕ್ಗಳಿಗೆ ಸೀಮಿತವಾಗಿದೆ. ಇದನ್ನು ಎಲ್ಲ ಬ್ಯಾಂಕ್ಗಳು ಮತ್ತು ಎಟಿಎಂ ಜಾಲಗಳಿಗೆ ವಿಸ್ತರಿಸಲಾಗುವುದು’ ಎಂದು ಹೇಳಿದರು.
ಕಾರ್ಡ್ರಹಿತ ಪಾವತಿ ವಿಧಾನಗಳ ಅಳವಡಿಕೆಯಿಂದ ಸ್ಕಿಮಿಂಗ್ ಮತ್ತು ಕಾರ್ಡ್ ಕ್ಲೋನಿಂಗ್ನಂಥ ಅಕ್ರಮಗಳನ್ನೂ ತಡೆಗಟ್ಟಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.
ಆರ್ಬಿಐ ನಿಯಂತ್ರಣದಲ್ಲಿರುವ ಹಣಕಾಸು ಸಂಸ್ಥೆಗಳು ಗ್ರಾಹಕರಿಗೆ ಒದಗಿಸುತ್ತಿರುವ ಸೇವೆಯ ಗುಣಮಟ್ಟದ ಬಗ್ಗೆ ಸಹ ನಾವು ನಿಗಾ ಇರಿಸುತ್ತೇವೆ. ಹೊಸಹೊಸ ಆವಿಷ್ಕಾರಗಳು, ಉತ್ಪನ್ನಗಳು ಮತ್ತು ಸೇವೆಗಳು ಬಳಕೆಗೆ ಬರುತ್ತಿವೆ. ಡಿಜಿಟಲ್ ಬ್ಯಾಂಕಿಂಗ್ ಸೇವೆಗಳ ಬಳಕೆದಾರರ ಸಂಖ್ಯೆ ಸಹ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಗ್ರಾಹಕ ಸೇವೆಗಳ ಸ್ಥಿತಿಗತಿ ಪರಿಶೀಲನೆಗೆ ಸಮಿತಿಯೊಂದನ್ನು ರಚಿಸಲಾಗುವುದು ಎಂದು ಅವರು ತಿಳಿಸಿದರು.