ಕೇರಳ – ಆನ್ಲೈನ್ ತರಗತಿಗಳ ಅವಧಿಯು 30 ನಿಮಿಷ ಮೀರದಂತೆ ಸಿಬಿಎಸ್ಇ ಶಾಲೆಗಳಿಗೆ ಆದೇಶ
ತಿರುವನಂತಪುರಂ, ಸೆಪ್ಟೆಂಬರ್18: ಆನ್ಲೈನ್ ತರಗತಿಗಳ ಅವಧಿಯು 30 ನಿಮಿಷಗಳನ್ನು ಮೀರದಂತೆ ನೋಡಿಕೊಳ್ಳುವಂತೆ ಕೇರಳ ರಾಜ್ಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗ ಬುಧವಾರ ರಾಜ್ಯದ ಸಿಬಿಎಸ್ಇ ಶಾಲೆಗಳಿಗೆ ಆದೇಶಿಸಿದೆ. ಪ್ರತಿ ತರಗತಿ ಮುಗಿದ ನಂತರ 15 ರಿಂದ 30 ನಿಮಿಷಗಳ ಕಾಲ ವಿಶ್ರಾಂತಿ ನೀಡುವಂತೆ ಆಯೋಗ ಶಾಲೆಗಳಿಗೆ ನಿರ್ದೇಶನ ನೀಡಿದೆ. ಇದಲ್ಲದೆ, ಆನ್ಲೈನ್ ತರಗತಿಗಳನ್ನು ದಿನದಲ್ಲಿ ಎರಡು ಗಂಟೆಗಳಿಗಿಂತ ಹೆಚ್ಚು ಕಾಲ ನಡೆಸಬಾರದು ಎಂದು ಅದು ಹೇಳಿದೆ.
ತಿರುವಲ್ಲಾದ ಸೇಂಟ್ ಮೇರಿಸ್ ರೆಸಿಡೆನ್ಶಿಯಲ್ ಪಬ್ಲಿಕ್ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಯ ಪೋಷಕರು ನೀಡಿದ ದೂರಿನ ಆಧಾರದ ಮೇಲೆ ಆಯೋಗವು ನಿರ್ದೇಶನ ನೀಡಿದೆ. ತರಗತಿಗಳಿಗೆ ಹಾಜರಾಗಲು ವಿದ್ಯಾರ್ಥಿಗಳು ಪ್ರಸ್ತುತ ಪ್ರತಿದಿನ ಬೆಳಿಗ್ಗೆ 9 ರಿಂದ ಸಂಜೆ 5.30 ರವರೆಗೆ ಮೊಬೈಲ್ ಫೋನ್ಗಳನ್ನು ಬಳಸಬೇಕಾಗಿದೆ. ಇದರ ಜೊತೆಗೆ ಅವರು ನಂತರ ಮನೆಕೆಲಸ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಫೋನ್ಗಳನ್ನು ಬಳಸಬೇಕಾಗುತ್ತದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದು ಮಕ್ಕಳಲ್ಲಿ ಮಾನಸಿಕ ಒತ್ತಡವನ್ನು ಉಂಟುಮಾಡಬಹುದು ಮತ್ತು ಅವರ ದೃಷ್ಟಿಗೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ದೂರುದಾರರು ತಿಳಿಸಿದ್ದಾರೆ.