`ಸರ್ಕಾರಕ್ಕೆ ಮುಜುಗರ ಉಂಟುಮಾಡುವ ಪ್ರಶ್ನೆಗಳನ್ನ ಕೇಳಬೇಡಿ ಪ್ಲೀಸ್’ : ಸಿ.ಸಿ.ಪಾಟೀಲ್
ಬೆಂಗಳೂರು : ಬಿಜೆಪಿ ಶಾಕಸರು ಸರ್ಕಾರಕ್ಕೆ ಮುಜುಗರ ಉಂಟುಮಾಡುವ ಪ್ರಶ್ನೆಗಳನ್ನ ಕೇಳಬಾರದು ಎಂದು ಸಚಿವ ಸಿ.ಸಿ.ಪಾಟೀಲ್ ಹೇಳಿದ್ದಾರೆ.
ವಿಧಾನ ಪರಿಷತ್ ನಲ್ಲಿ ಆಡಳಿತ ಪಕ್ಷದ ಸದಸ್ಯ ಸಂಕನೂರ ಅವರು, ಗದಗದ ಪಶು ವೈದ್ಯಕೀಯ ಕಾಲೇಜಿಗೆ ಮೂಲ ಸೌಲಭ್ಯಗಳ ಕೊರತೆ ಹಾಗೂ ತಾಂತ್ರಿಕ ಸಮಸ್ಯೆ ಮತ್ತು ಅಲ್ಲಿನ ವಿದ್ಯಾರ್ಥಿಗಳಿಗೆ ಮತ್ತು ಸಿಬ್ಬಂದಿಗಳ ಬಗ್ಗೆ ಪ್ರಸ್ತಾಪಿಸಿ, ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಎಂದರು.
ಆದರೆ ಸಂಕನೂರ ಅವರು ವಿಷಯ ಪ್ರಸ್ತಾಪಿಸುವ ಮೊದಲೇ ಸಚಿವ ಪ್ರಭು ಚೌಹಾಣ್, ಇದಕ್ಕೆ ನಾಳೆ ಉತ್ತರ ನೀಡುವುದಾಗಿ ಹೇಳಲು ಮುಂದಾದ್ರು. ಆಗ ಮೊದಲು ಪ್ರಶ್ನೆ ಕೇಳಲಿ, ತಾವು ಕುಳಿತುಕೊಳ್ಳಿ ಎಂದು ಸಭಾಪತಿ ತಾಕೀತು ಮಾಡಿದರು.
ಬಳಿಕ ಈ ಬಗ್ಗೆ ಮಾತನಾಡಿದ ಸಿ.ಸಿ ಪಾಟೀಲ್, ಈ ವಿಚಾರ ಕುರಿತಂತೆ ಈಗಾಗಲೇ ಚರ್ಚೆ ಮಾಡಿದ್ದೇವೆ.
ಮೊದಲು ಅನುದಾನ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುತ್ತೇವೆ. ಆಡಳಿತ ಪಕ್ಷದ ಸದಸ್ಯರು ಸರ್ಕಾರಕ್ಕೆ ಮುಜುಗರವಾಗುವಂತಹ ಪ್ರಶ್ನೆ ಕೇಳಬಾರದು ಎಂದರು.