ಬೆಂಗಳೂರು: ಡ್ರಗ್ಸ್ ಜಾಲದಲ್ಲಿ ಸಿಲುಕಿ ನಶೆ ನಂಟು ಹಾಗೂ ನಶೆ ಏರಿಸಿಕೊಂಡವರ ಬೆನ್ನುಹತ್ತಿರುವ ಸಿಸಿಬಿ ಪೊಲೀಸರಿಗೆ ಆಂತರಿಕ ಭದ್ರತಾ ವಿಭಾಗ ಸಾಥ್ ನೀಡಿರುವುದು ಘಟಾನುಘಟಿಗಳು, ಹಾಗೂ ರಾಜಕಾರಣಿಗಳು, ಉದ್ಯಮಿಗಳ ಮಕ್ಕಳಿಗೆ ನಡುಕ ಶುರುವಾಗಿದೆ.
ಆಂತರಿಕ ಭದ್ರತಾ ವಿಭಾಗದ ಪೊಲೀಸರು ಸ್ಟಾರ್ ನಟ ಲೂಸ್ ಮಾದ ಹಾಗೂ ಮಾಜಿ ಕ್ರಿಕೆಟಿಗ, ನಟಿ ಪ್ರೇಮಾ ಸಹೋದರ ಎನ್.ಸಿ ಅಯ್ಯಪ್ಪ ಅವರನ್ನು ಕರೆಸಿ ವಿಚಾರಣೆ ನಡೆಸಿರುವುದು ಡ್ರಗ್ಸ್ ನಶೆ ಏರಿಸಿಕೊಂಡವರಿಗೆ ಢವಢವ ಶುರುವಾಗಿದೆಯಂತೆ.
ಡ್ರಗ್ಸ್ ಪ್ರಕರಣದ ಪ್ರಮುಖ ಹಾಗೂ ಎ-1 ಆರೋಪಿಗೆ ಶಿವಪ್ರಕಾಶ್, ಎ-6 ಆರೋಪಿ ಆದಿತ್ಯ ಆಳ್ವಗೆ ಸಿಸಿಬಿ ಪೊಲೀಸರು ಲುಕ್‍ಔಟ್ ನೋಟಿಸ್ ಜಾರಿ ಮಾಡಿದ್ದಾರೆ.


ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಎಫ್‍ಐಆರ್ ದಾಖಲಿಸಿಕೊಳ್ಳುತ್ತಿದ್ದಂತೆ ಡ್ರಗ್ಗಿಣಿ ರಾಗಿಣಿ ಮೊದಲ ಬಾಯ್‍ಫ್ರೆಂಡ್ ಹಾಗೂ ನಾಟಿ ಕೋಳಿ ಚಿತ್ರದ ನಿರ್ಮಾಪಕ ಶಿವಪ್ರಕಾಶ್ ತಲೆ ಮರೆಸಿಕೊಂಡಿದ್ದಾನೆ. ಹೀಗಾಗಿ ಆತನ ಪತ್ತೆಗಾಗಿ ಸಿಸಿಬಿ ವ್ಯಾಪಕ ಬಲೆ ಬೀಸಿದೆ.
ಮತ್ತೊಂದೆಡೆ, ಮಾಜಿ ಸಚಿವ ದಿ. ಜೀವರಾಜ್ ಆಳ್ವ ಪುತ್ರ ಕೂಡ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಲುಕ್‍ಔಟ್ ನೋಟಿಸ್ ಜಾರಿ ಮಾಡಲಾಗಿದೆ.
ಹಾಲಿ, ಮಾಜಿ ಸಂಸದರ ಪುತ್ರರಿಗೂ ಕಂಟಕ..!
ಹಾಲಿ ಬಿಜೆಪಿ ಸಂಸದ, ಮಾಜಿ ಜೆಡಿಎಸ್ ಸಂಸದರ ಪುತ್ರರಿಗೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದಾರೆ ಎನ್ನಲಾಗಿದೆ. ಆದರೆ, ಅವರು ಸಿಸಿಬಿ ಪೊಲೀಸರ ವಿಚಾರಣೆಗೆ ಬರ್ತಾರಾ, ಪ್ರಭಾವ ಬಳಸಿ ಬಾಚಾವಾಗ್ತರಾ ಎಂಬುದು ಸದ್ಯದಲ್ಲೇ ಗೊತ್ತಾಗಲಿದೆ.


ಮತ್ತೊಂದೆಡೆ ಗಟ್ಟಿಮೇಳ ಧಾರವಾಹಿಯ ನಟ ವಿಕ್ಕಿ, ಬ್ರಹ್ಮಗಂಟು ಖ್ಯಾತಿಯ ಗೀತಾ ಅಲಿಯಾಸ್ ಭಾರತಿ ಭಟ್‍ಗೂ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದು ವಿಚಾರಣೆಗೆ ನಾಳೆ ಬರುವಂತೆ ಸೂಚಿಸಲಾಗಿದೆ.








