ಬೆಂಗಳೂರು: ಡ್ರಗ್ಸ್ ಜಾಲದ ಬೆನ್ನು ಹತ್ತಿರುವ ಸಿಸಿಬಿ ಪೊಲೀಸರು ಈ ಸಂಬಂಧ ಹೆಚ್ಚಿನ ಮಾಹಿತಿ ಇದ್ದರೆ ಹಂಚಿಕೊಳ್ಳುವಂತೆ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿಗೆ ನೋಟಿಸ್ ನೀಡಿದ್ದಾರೆ.
ನಾಳೆ ಬೆಳಿಗ್ಗೆ 11 ಗಂಟೆಗೆ ಸಿಸಿಬಿ ಕಚೇರಿಗೆ ಬರುವಂತೆ ಸಂಬರಗಿಗೆ ನೋಟಿಸ್ ನೀಡಲಾಗಿದೆ. ಪ್ರಶಾಂತ್ ಸಂಬರಗಿ ನೀಡುವ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹೇಳಿದ್ದಾರೆ.
ಡ್ರಗ್ಸ್ ಜಾಲದಲ್ಲಿ ಸ್ಯಾಂಡಲ್‍ವುಡ್‍ನ ನಟ-ನಟಿಯರು ಶಾಮೀಲಾಗಿದ್ದಾರೆ ಎಂದು ಎನ್‍ಸಿಬಿ ತಂಡ ಡ್ರಗ್ ಪೆಡ್ಲರ್ ಅನಿಕಾಳನ್ನು ಬಂಧಿಸಿದಾಗ ಮಾಹಿತಿ ಬಹಿರಂಗಪಡಿಸಿದ್ದಳು.
ಇದರ ಬೆನ್ನಲ್ಲೇ, ನಿರ್ದೇಶಕ ಇಂದ್ರಜಿತ್ ಲಂಕೇಶ್ ಡ್ರಗ್ಸ್ ಮಾಫಿಯಾದಲ್ಲಿರುವ ಸ್ಯಾಂಡಲ್‍ವುಡ್‍ನ ಕೆಲವರ ಮಾಹಿತಿ ನೀಡಲು ಸಿದ್ಧ ಎಂದು ಹೇಳಿದ್ದರು. ಬಳಿಕ ಇಂದ್ರಜಿತ್ ಲಂಕೇಶ್‍ಗೂ ನೋಟಿಸ್ ನೀಡಿ ಸಿಸಿಬಿ ಪೊಲೀಸರು ಹೇಳಿಕೆ ದಾಖಲಿಸಿದ್ದರು.
ಇದೀಗ ನಾನು ಕೂಡ ಡ್ರಗ್ಸ್ ದಂಧೆ ಬಗ್ಗೆ ಮಾಹಿತಿ ನೀಡಲು ಸಿದ್ಧ ಎಂದು ಪ್ರಶಾಂತ್ ಸಂಬರಗಿ ಬಹಿರಂಗ ಹೇಳಿಕೆ ನೀಡಿದ್ದರು. ಶಾಸಕ ಜಮೀರ್ ಹಾಗೂ ಆರೋಪಿ ಸಂಜನಾ ಬಗ್ಗೆ ಆರೋಪ ಮಾಡಿದ್ದ ಸಂಬರಗಿ, ತನಿಖಾ ಸಂಸ್ಥೆಗಳು ಕರೆದರೆ ಮಾಹಿತಿ ಹಂಚಿಕೊಳ್ಳುವುದಾಗಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಪ್ರಶಾಂತ್ ಸಂಬರಗಿಗೆ ನೋಟಿಸ್ ನೀಡಿದ್ದಾರೆ.
ಇಂದ್ರಜಿತ್ ಲಂಕೇಶ್ ಹೇಳಿಕೆ ಬೆನ್ನಲ್ಲೇ ನಟಿ ರಾಗಿಣಿ ಹಾಗೂ ಸಂಜನಾ ಬಂಧನವಾಗಿರುವುದು ಸ್ಯಾಂಡಲ್‍ವುಡ್‍ನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಪ್ರಶಾಂತ್ ಸಂಬರಗಿ ಇನ್ಯಾರ ಹೆಸರು ಬಾಯ್ಬಿಡುತ್ತಾರೋ ಎಂಬ ಆತಂಕ ಕೆಲವರನ್ನು ಕಾಡುತ್ತಿದೆ ಎನ್ನಲಾಗಿದೆ.








