ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ನಟಿ ರಾಗಿಣಿ ದ್ವಿವೇದಿ ಅರೆಸ್ಟ್ ಆದ ಬೆನ್ನಲ್ಲೇ ಮತ್ತೊರ್ವ ಕಾಂಟ್ರೋವರ್ಸಿ ನಟಿ ಸಂಜನಾ ಗಲ್ರಾನಿಗೂ ಸಿಸಿಬಿ ಪೊಲೀಸರು ಬೆಳ್ಳಂಬೆಳಿಗ್ಗೆ ಶಾಕ್ ನೀಡಿದ್ದಾರೆ.
ಇಂದು ಬೆಳಿಗ್ಗೆ 6.30ರ ವೇಳೆಗೆ ಬೆಂಗಳೂರಿನ ಇಂದಿರಾನಗರದ ಸಾಯಿತೇಜ ಅಪಾರ್ಟ್ಮೆಂಟ್ ಮೇಲೆ ಸಿಸಿಬಿ ಅಧಿಕಾರಿಗಳಾದ ಅಂಜುಮಾಲಾ, ಪುನೀತ್ ನೇತೃತ್ವದ 8 ಅಧಿಕಾರಿಗಳ ತಂಡ ದಾಳಿ ನಡೆಸಿದೆ.
ನಿನ್ನೆಯಷ್ಟೇ ಡ್ರಗ್ಸ್ ಪೆಡ್ಲರ್ ಪೃಥ್ವಿ ಶೆಟ್ಟಿ ನೀಡಿದ ಹೇಳಿಕೆ ಆಧರಿಸಿ ಸಂಜನಾ ಮನೆ ಮೇಲೆ ದಾಳಿ ನಡೆದಿದೆ ಎನ್ನಲಾಗಿದೆ. ಈವೆಂಟ್ ಮ್ಯಾನೇಜ್ಮೆಂಟ್ ನಡೆಸುತ್ತಿದ್ದ ಪೃಥ್ವಿ ಶೆಟ್ಟಿ, ಸಂಜನಾ ಆಪ್ತೆ. ಜತೆಗೆ ಪೃಥ್ವಿ ಶೆಟ್ಟಿ ಸಂಜನಾ ಬ್ಯುಸಿನೆಸ್ ಪಾರ್ಟನರ್.
ಕಳೆದ ಒಂದು ವಾರದಿಂದ ಸಂಜನಾಗೆ ಸಿಸಿಬಿ ನೋಟಿಸ್ ನೀಡುವುದು ಪಕ್ಕಾ ಎಂಬ ವರದಿಗಳು ಬರುತ್ತಿದ್ದವು. ಆದರೆ, ಯಾವುದೇ ನೋಟಿಸ್ ನೀಡದೇ ಸರ್ಚ್ ವಾರೆಂಟ್ನೊಂದಿಗೆ ತೆರಳಿದ ಸಿಸಿಬಿ ಅಧಿಕಾರಿಗಳು ಸಂಜನಾ ಮನೆಯಲ್ಲಿ ತೀವ್ರ ಶೋಧ ನಡೆಸಿದ್ದಾರೆ.
ಇದೇ ವೇಳೆ ಸಿಸಿಬಿ ಪೊಲೀಸರು ಬಂಧಿಸಿರುವ ಸಂಜನಾ ಆಪ್ತ ರಾಹುಲ್ನನ್ನು ಬಂಧಿಸಿದ್ದಾರೆ. ಈತ ಕೂಡ ಸಂಜನಾ ಬಗ್ಗೆ ಸ್ಫೋಟಕ ಮಾಹಿತಿ ನೀಡಿದ್ದಾನೆ. ಹೈಪೈ ಪಾರ್ಟಿಗಳನ್ನು ಆಯೋಜಿಸುತ್ತಿದ್ದ ರಾಹುಲ್, ರಿಯಲ್ ಎಸ್ಟೇಟ್ ಉದ್ಯಮಿ. ಜತೆಗೆ ಶ್ರೀಲಂಕಾ ಸೇರಿದಂತೆ ಹಲವೆಡೆ ಕ್ಯಾಸಿನೋ ನಡೆಸುತ್ತಿದ್ದ. ಈತ ನಡೆಸುತ್ತಿದ್ದ ಪಾರ್ಟಿಗಳಿಗೆ ಸಂಜನಾರನ್ನು ಕರೆದೊಯ್ಯುತ್ತಿದ್ದ ರಾಹುಲ್, ಡ್ರಗ್ಸ್ ದಂಧೆ ನಡೆಸುತ್ತಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ನಟಿ ಸಂಜನಾ ಮನೆ ಮೇಲೆ ದಾಳಿ ಮಾಡಲಾಗಿದೆ.