ಸ್ಯಾಂಡಲ್ ವುಡ್ ಬಾದ್ ಷಾ ಕಿಚ್ಚ ಸುದೀಪ್ ಗೆ ಭಾರತ ಮಾತ್ರವಲ್ಲದೇ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ. ತಮ್ಮ ಅಭಿನಯದ ಮೂಲಕವೇ ಕೋಟ್ಯಾಂತರ ಅಭಿಮಾನಿಗಳ ಹೃದಯ ಗೆದ್ದಿರುವ ಮಾಣಿಕ್ಯ ಸದ್ಯ ಭಾರತೀಯ ಚಿತ್ರರಂಗದ ಬಹು ಬೇಡಿಕೆಯ ನಟ. ಈ ಕರುನಾಡ ಹೆಬ್ಬುಲಿಯ ಘರ್ಜನೆ ಸದ್ಯ ಭಾರತದಾದ್ಯಂತ ಕೇಳಿಸುತ್ತಿದೆ. ಏತನ್ಮಧ್ಯೆ ರನ್ನನ ಅಭಿಮಾನಿಗಳು ಸದ್ಯ ಸಂಭ್ರಮದಲ್ಲಿ ತೊಡಗಿಕೊಂಡಿದ್ದಾರೆ. ಸುದೀಪಿಯನ್ಸ್ ಅಬ್ಬರಕ್ಕೆ ಟ್ವಿಟ್ಟರ್ ಶೇಕ್ ಆಗಿಬಿಟ್ಟಿದೆ. ಅಂದ್ಹಾಗೆ ಸುದೀಪ್ ಅಭಿಮಾನಿಗಳ ಈ ಸಂಭ್ರಮಕ್ಕೆ ಕಾರಣ ಏನೇಂದರೇ, ಅದು ಅಭಿನಯ ಚಕ್ರವರ್ತಿಯ ಹುಟ್ಟುಹಬ್ಬ. ಅರ‍್ರೆ ಸುದೀಪ್ ಬರ್ತ್ ಡೇ ಇರೋದು ಸೆ.2ಕ್ಕೆ ಅಲ್ವಾ? ಈಗ್ಯಾಕೆ ಕಿಚ್ಚನ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ ಎಂದರೇ ಅದಕ್ಕೆ ಉತ್ತರ ಸಿಂಪಲ್, ಇದೇ ಕಿಚ್ಚನ ಕ್ರೇಜ್.
ಸುದೀಪ್ ಜನ್ಮದಿನಕ್ಕೆ ಇನ್ನೂ ನೂರು ದಿನ ಬಾಕಿ ಇದ್ದು, ಈಗಿನಿಂದಲೇ ಕಿಚ್ಚನ ಅಭಿಮಾನಿಗಳು ಅದರ ಸಂಭ್ರಮದ ಸ್ವಾಗತಕ್ಕೆ ಸಿದ್ಧತೆ ನಡೆಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ‘ಕಿಚ್ಚೋತ್ಸವ’ ಶುರುವಾಗಿದೆ.ನಟ ನಿರೂಪ್ ಭಂಡಾರಿ ಅವರು ಸಂಭ್ರಮಕ್ಕೆ ಚಾಲನೆ ನೀಡಿದ್ದಾರೆ. ನಿರೂಪ್ ಸುದೀಪ್ ಜನ್ಮದಿನದ ಅಂಗವಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿರುವ ‘ಕಿಚ್ಚೋತ್ಸವ 2020’ಯ ಸಿಡಿಪಿ ಮತ್ತು 100DaysForKicchotsava ಎಂಬ ಹ್ಯಾಷ್ ಟ್ಯಾಗ್ ಬಿಡುಗಡೆ ಮಾಡಿದ್ದಾರೆ. ಈ ಈ ಉತ್ಸವಕ್ಕೆ ಚಾಲನೆ ದೊರಕಿದ ಕೇವಲ 20 ಗಂಟೆಗಳಲ್ಲೇ 100DaysForKicchotsava ಎಂಬ ಹ್ಯಾಷ್ ಟ್ಯಾಗ್ ನಡಿ ಒಂದು ಮಿಲಿಯನ್‌ಗೂ ಅಧಿಕ ಟ್ವೀಟ್ ಗಳು ಸೃಷ್ಟಿಯಾಗಿವೆ.
ನಟನೊಬ್ಬರ ಜನ್ಮದಿನಕ್ಕೆ ನೂರು ದಿನ ಮುಂಚಿತವಾಗಿಯೇ ಶುಭಾಶಯ ಕೋರುವ ಮೂಲಕ ದಾಖಲೆಯ ಪ್ರಮಾಣದಲ್ಲಿ ಟ್ವೀಟ್ ಮಾಡಿರುವುದು ಕಿಚ್ಚ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಕನ್ನಡ ಚಿತ್ರರಂಗದಲ್ಲಿ ಇದೊಂದು ವಿಶಿಷ್ಟ ದಾಖಲೆ ಎಂದು ಕಿಚ್ಚನ ಅಭಿಮಾನಿಗಳು ಹೇಳಿಕೊಂಡಿದ್ದಾರೆ.








