ಬೆಂಗಳೂರು: ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಆಯವ್ಯಯವು ಆತ್ಮಬರ್ಬರ ಬಜೆಟ್ ಹಾಗೂ ಬರ್ಬಾದ್ (ನಾಶ, ದಿವಾಳಿ) ಬಜೆಟ್ ಎಂದು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಬಜೆಟ್ ಕುರಿತು ತಮ್ಮ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಬಜೆಟ್ ಕುರಿತು ನನಗೆ ಯಾವುದೇ ನಿರೀಕ್ಷೆ ಇಲ್ಲ ಎಂದು ಹೇಳಿದ್ದೆ. ಅದು ನಿಜವಾಗಿದೆ ಎಂದರು.
ಆತ್ಮನಿರ್ಭರ ಯೋಜನೆಯಲ್ಲಿ ಹಣಕಾಸು ಸಚಿವರು ಮೂರು ಪ್ಯಾಕೇಜ್ ಘೋಷಣೆ ಮಾಡಿದ್ದರು. ಈ ಬಜೆಟ್ ಅದರ ಮುಂದುವರಿದ ಭಾಗವಾಗಿದೆ. ನಿರ್ಮಲಾ ಸೀತಾರಾಮನ್ ಅವರು ಇದೀಗ ಆತ್ಮಬರ್ಬರ ಬಜೆಟ್ ಕೊಟ್ಟಿದ್ದಾರೆ. ಅದು ಆತ್ಮಬರ್ಬಾದ್ (ನಾಶ, ದಿವಾಳಿ) ಬಜೆಟ್ ಆಗಿದೆ ಎಂದು ವ್ಯಂಗ್ಯವಾಡಿದ್ದಾರೆ.
ಆರ್ಥಿಕ ಪರಿಸ್ಥಿತಿ ಅಧೋಗತಿ
ಸಾಮಾನ್ಯ ಜನರು ಬಜೆಟ್ ಕುರಿತು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಕೊರೊನಾ ಹಿನ್ನೆಲೆಯಲ್ಲಿ ಉತ್ತಮವಾದ ಬಜೆಟ್ ನಿರೀಕ್ಷೆ ಮಾಡಿದ್ದರು. ದೇಶದ ಆರ್ಥಿಕ ಪರಿಸ್ಥಿತಿ ಅಧೋಗತಿಗೆ ಹೋಗಿರುವುದರಿಂದ ಕೇಂದ್ರ ಸರ್ಕಾರದಿಂದ ಚೇತರಿಕೆಯ ಹಾದಿ ನಿರೀಕ್ಷೆ ಮಾಡಲಾಗಿತ್ತು. ಆದರೆ, ಅದು ಹುಸಿಯಾಗಿದೆ.
ಲಾಕ್ಡೌನ್ ಪರಿಣಾಮ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಮುಚ್ಚಿ ಸಾಕಷ್ಟು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಕೈಗಾರಿಕೆಗಳ ಪುನಶ್ಚೇತನದ ನಿರೀಕ್ಷೆಯೂ ಹುಸಿಯಾಗಿದೆ. ಆರ್ಥಿಕ ತಜ್ಞರು ನೀಡಿದ್ದ ಸಲಹೆಗಳನ್ನೂ ಕೇಂದ್ರ ಸರ್ಕಾರ ಗಾಳಿಗೆ ತೂರಿದೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಹೊಸದಾಗಿ ಕೃಷಿ ಸೆಸ್ ಘೋಷಣೆ ಮಾಡಲಾಗಿದೆ. ಎರಡೂವರೆ ಪರ್ಸೆಂಟ್ ನಿಂದ ನೂರು ಪಸೆರ್ಂಟ್ ವರೆಗೆ ಸೆಸ್ ವಿಧಿಸಲಾಗಿದೆ. ಒಂದೆಡೆ ದೇಶಕ್ಕೆ ಬರುವ ಕೃಷಿ ಉತ್ಪನ್ನಗಳ ಮೇಲಿನ ಆಮದು ಸುಂಕ ಕಡಿಮೆ ಮಾಡಿ ಮತ್ತೊಂದೆಡೆ ಕೃಷಿ ಸೆಸ್ ವಿಧಿಸಲಾಗಿದೆ. ಕೃಷಿ ಉತ್ತೇಜನಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬಜೆಟ್ ನಲ್ಲಿ ತಿಳಿಸಲಾಗಿದೆ ಎಂದರು.
ಆಮದು ಸುಂಕ ಕಡಿತ
ಗೊಬ್ಬರ, ಸೇಬು, ಯಂತ್ರೋಪಕರಣಗಳು, ಕೃಷಿ ಉತ್ಪನ್ನಗಳ ಮೇಲೆ ಸೆಸ್ ವಿಧಿಸಿ ಆಮದು ಸುಂಕ ಕಡಿಮೆ ಮಾಡಿರುವುದು ಯಾವ ಆರ್ಥಿಕತೆ ಎಂಬುದು ಅರ್ಥವಾಗಿಲ್ಲ. ಅದರ ಬದಲಿಗೆ ರೈತರಿಗೆ ಸಾಲ ವಿತರಿಸುವ ಕಾರ್ಯಕ್ರಮ ಘೋಷಣೆ ಮಾಡಬಹುದಾಗಿತ್ತು.
ಬಡ್ಡಿ ರಹಿತವಾಗಿ ರೈತರಿಗೆ ಸಾಲ ನೀಡುವ, ಸಾಲ, ಸಾಲದ ಮೇಲಿನ ಬಡ್ಡಿ ಮನ್ನಾ ಮಾಡುವ ನಿರೀಕ್ಷೆ ರೈತರಿಗೆ ಇತ್ತು. ಅದು ಅವರ ಬಹು ದಿನಗಳ ಬೇಡಿಕೆಯಾಗಿತ್ತು. ಒಂದು ರೂಪಾಯಿ ಸಾಲ ಮನ್ನಾ ಮಾಡಿಲ್ಲ. ವಸೂಲಿ ಮಾಡುವ ಕೃಷಿ ಸೆಸ್ ನ್ನು ರೈತರ ಕಲ್ಯಾಣಕ್ಕೆ ಖರ್ಚು ಮಾಡಲು ಹೊಸ ಕಾರ್ಯಕ್ರಮಗಳನ್ನು ಘೋಷಣೆ ಮಾಡಿಲ್ಲ. ಕೃಷಿ ಪದಾರ್ಥಗಳ ಬೆಲೆ ಕುಸಿದಾಗ ಮಾರುಕಟ್ಟೆ ಮಧ್ಯೆ ಪ್ರವೇಶ ಮಾಡಿ ಬೆಂಬಲ ಬೆಲೆ ನೀಡುವ ಪ್ರಯತ್ನ ಆಗಿಲ್ಲ ಎಂದು ಸಿದ್ದರಾಮಯ್ಯ ವಿಶ್ಲೇಷಿಸಿದ್ದಾರೆ.
ಚುನಾವಣೆ ಬಜೆಟ್
ಕೊರೊನಾದಿಂದ ಸಂಕಷ್ಟಕ್ಕೆ ಒಳಗಾದವರಿಗೆ ಯಾವುದೇ ಪರಿಹಾರ ಬಜೆಟ್ ನಿಂದ ಸಿಕ್ಕಿಲ್ಲ. ಚುನಾವಣೆ ನಡೆಯುವ ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು ಮತ್ತು ಅಸ್ಸಾಂ ರಾಜ್ಯಗಳಿಗೆ ಹೆಚ್ಚು ಹಣ ನೀಡಲಾಗಿದೆ. ಮೆಟ್ರೋ ಯೋಜನೆಗೆ ತಮಿಳುನಾಡಿಗೆ 5.30ಲಕ್ಷ ಸಾವಿರ ಕೋಟಿ, ಕರ್ನಾಟಕಕ್ಕೆ 14,780 ನೀಡಲಾಗಿದೆ. ಪ್ರತಿ ವರ್ಷ ಚುನಾವಣೆ ನಡೆಸಿದರೆ ನಮಗೂ ಹೆಚ್ಚಿನ ಅನುದಾನ ನೀಡಬಹುದು ಎಂಬ ಭಾವನೆ ನನ್ನದು ಎಂದು ಸಿದ್ದರಾಮಯ್ಯ ಅವರು ಲೇವಡಿ ಮಾಡಿದರು.
2020-2021ನೇ ಸಾಲಿಗೆ ಜಿಡಿಪಿ ಬೆಳವಣಿಗೆಯನ್ನು ಶೇ.11ಕ್ಕೆ ಏರಿಸುವುದಾಗಿ ಕೇಂದ್ರ ಘೋಷಣೆ ಮಾಡಿದೆ. ಇದು ನಂಬಲು ಸಾಧ್ಯವೇ ? ಇದು ಸುಳ್ಳಿನ ಕಂತೆ. ಅಂಕಿ-ಅಂಶಗಳನ್ನು ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಇದಾಗಿದೆ.
ಅಂಬಾನಿ, ಅಂದಾನಿಗೆ ಅನುಕೂಲ
ರೈಲ್ವೆ ನಿಲ್ದಾಣ, ಬಂದರು, ವಿಮಾನ ನಿಲ್ದಾಣಗಳನ್ನು ಅಂಬಾನಿ, ಅಂದಾನಿ ಮತ್ತಿತರ ಬಂಡವಾಳಶಾಹಿಗಳಿಗೆ ಕೊಟ್ಟು ಕೇಂದ್ರ ಸರ್ಕಾರ ಕೈ ತೊಳೆದುಕೊಳ್ಳಲು ಹೊರಟಿದೆ. ದಕ್ಷತೆಯಿಂದ ನಡೆಸುವುದನ್ನು ಬಿಟ್ಟು ಬಂಡವಾಳ ಹಿಂತೆಗೆದುಕೊಂಡರೆ ಮೀಸಲು ವ್ಯವಸ್ಥೆಗೆ ಪೆಟ್ಟು ಬೀಳುತ್ತದೆ. ಖಾಸಗಿಯವರ ಬಳಿ ಮೀಸಲು ಸೌಲಭ್ಯ ಕೇಳಲು ಸಾಧ್ಯವೇ ? ಪರೋಕ್ಷವಾಗಿ ಮೀಸಲು ಸೌಲಭ್ಯ ತೆಗೆಯಲು ಸರ್ಕಾರ ಮುಂದಾಗಿದೆ. ಅಂಬಾನಿ, ಅದಾನಿ ಮೀಸಲು ಸೌಲಭ್ಯ ಕೊಡುವರೇ ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel