ಕೃಷಿ ವಲಯದಲ್ಲಿ ತಂತ್ರಜ್ಞಾನ ಬಳಕೆಗೆ ಕೇಂದ್ರ ಸರ್ಕಾರ ಉತ್ತೇಜನ
ಕೃಷಿ ವಲಯದಲ್ಲಿ ತಂತ್ರಜ್ಞಾನ ಬಳಕೆಗೆ ಕೇಂದ್ರ ಸರ್ಕಾರ ಉತ್ತೇಜನ ನೀಡಿದ್ದು, ಯಾವುದೇ ಹಣಕಾಸು ಕೊರತೆ ಇಲ್ಲ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವ ಕೈಲಾಶ್ ಚೌಧರಿ ಲೋಕಸಭೆಯಲ್ಲಿಂದು ಹೇಳಿದ್ದಾರೆ.
ಪ್ರಶ್ನೋತ್ತರ ವೇಳೆಯಲ್ಲಿ ವಿವರ ನೀಡಿದ ಸಚಿವರು, ಕೃಷಿ ವಲಯದಲ್ಲಿ ನವೋದ್ಯಮಗಳ ಸಂಖ್ಯೆ ಹೆಚ್ಚುತ್ತಿದ್ದು, 2 ಸಾವಿರಕ್ಕೂ ಹೆಚ್ಚು ಸ್ಟಾರ್ಟ್ ಅಪ್ ಗಳಿಗೆ ನಬಾರ್ಡ್ ಮೂಲಕ ಅಗತ್ಯ ನೆರವು ಕಲ್ಪಿಸಲಾಗುತ್ತಿದೆ. ನವೋದ್ಯಮಗಳಿಂದಾಗಿ ಯುವಜನರ ಪ್ರತಿಭೆಗೆ ಉತ್ತಮ ವೇದಿಕೆ ದೊರೆಯುತ್ತಿದ್ದು, ಉದ್ಯೋಗಾವಕಾಶ ಹೆಚ್ಚುತ್ತಿದೆ ಎಂದು ವಿವರಿಸಿದರು.
ಕೊರೋನಾ ಸಂಕಷ್ಟ ಕಾಲದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೂರದೃಷ್ಟಿಯಿಂದ ಒಂದು ಲಕ್ಷ ಕೋಟಿ ರೂಪಾಯಿ ಮೌಲ್ಯದ ಕೃಷಿ ಮೂಲಸೌಕರ್ಯ ಯೋಜನೆಗೆ ಚಾಲನೆ ನೀಡಿದ್ದು, ಡ್ರೋಣ್ ತಂತ್ರಜ್ಞಾನ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನ ಬಳಕೆಗೆ ಆದ್ಯತೆ ನೀಡಲಾಗಿದೆ ಎಂದು ಸಚಿವರು ವಿವರಿಸಿದರು.
ಪಶುಪಾಲನೆ ಮತ್ತು ಹೈನುಗಾರಿಕೆ ಖಾತೆ ರಾಜ್ಯ ಸಚಿವ ಡಾ. ಸಂಜೀವ್ ಕುಮಾರ್ ಬಾಲಿಯಾನ್, ಹೈನುಗಾರಿಕೆ ವಲಯವನ್ನು ಸರ್ಕಾರ ಆದ್ಯತೆಯಾಗಿ ಪರಿಗಣಿಸಿದ್ದು, ಸಹಕಾರಿ ವ್ಯವಸ್ಥೆಯಲ್ಲಿ ಕ್ಷೀರ ಉತ್ಪಾದನೆ, ಯಂತ್ರೋಪಕರಣ ಬಳಕೆ , ಗುಣಮಟ್ಟ ತಪಾಸಣೆ ಮತ್ತಿತರ ಸೌಲಭ್ಯಗಳಿಗೆ ಸಹಾಯಧನ ನೀಡುತ್ತಿದೆ. ಹೈನುಗಾರಿಕೆ ಘಟಕ ಆರಂಭಿಸಲು ಎರಡು ಕೋಟಿ ರೂಪಾಯಿ ನೆರವು ನೀಡಲಾಗುತ್ತಿದೆ ಎಂದು ತಿಳಿಸಿದರು.
Central government promotion of technology use in agriculture