ಕಲಬುರಗಿ: ಕಳೆದ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ಸುರಿದ ಧಾರಕಾರ ಮಳೆ ಹಾಗೂ ಮಹಾರಾಷ್ಟ್ರದಿಂದ ಬಂದ ಪ್ರವಾಹದಿಂದಾಗಿ ಕೃಷ್ಣಾ ಹಾಗೂ ಭೀಮಾ ನದಿಗಳು ಉಕ್ಕಿ ಹರಿದಿದ್ದವು. ಪರಿಣಾಮ ಕಲಬುರಗಿ, ವಿಜಯಪುರ, ಬೀದರ್ ಜಿಲ್ಲೆಗಳಲ್ಲಿ ಭಾರಿ ಪ್ರವಾಹ ಉಂಟಾಗಿ ಮನೆ, ಆಸ್ತಿಪಾಸ್ತಿ ಹಾಗೂ ಅಪಾರ ಪ್ರಮಾಣದ ಬೆಳೆ ನಾಶವಾಗಿತ್ತು.
ಈ ಹಿನ್ನೆಲೆಯಲ್ಲಿ ಭೀಮಾ ಹಾಗೂ ಕೃಷ್ಣೆ ಪ್ರವಾಹದಿಂದ ಹಾನಿಗೀಡಾದ ಬೆಳೆ, ಮನೆ ಮತ್ತು ಮೂಲ ಸೌಕರ್ಯಗಳ ಹಾನಿ ಕುರಿತಂತೆ ಕೇಂದ್ರ ನೆರೆ ಅಧ್ಯಯನ ತಂಡ ಕಲಬುರಗಿ ಹಾಗೂ ವಿಜಯಪುರ ಜಿಲ್ಲೆಯಲ್ಲಿ ಹಾನಿಯ ಪರಿಶೀಲನೆ ನಡೆಸಿದೆ.

ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ರಮೇಶ್ ಕುಮಾರ್ ಘಂಟಾ ನೇತೃತ್ವದ ತಂಡ, ಮೊದಲು ಕಲಬುರಗಿ ಆಗಮಿಸಿ ಜಿಲ್ಲಾಧಿಕಾರಿ ವಿ.ವಿ ಜೋತ್ಸ್ನಾ ಜತೆ ಸಭೆ ನಡೆಸಿ ಪ್ರವಾಹದ ಹಾನಿಯ ಮಾಹಿತಿ ಪಡೆದುಕೊಂಡಿದೆ.
ಸಭೆ ಬಳಿಕ ಪ್ರವಾಹದಿಂದ ತತ್ತರಿಸಿದ ಕಲಬುರಗಿ ಜಿಲ್ಲೆಯ ಅಫಜಲಪುರ, ಜೇಬರ್ಗಿ ತಾಲೂಕಿನ ಹಲವೆಡೆ ಪರಿಶೀಲನೆ ನಡೆಸಿತು.
ನಂತರ ವಿಜಯಪುರ ಜಿಲ್ಲೆಯ ಭೀಮಾ ಹಾಗೂ ಡೋಣಿ ನದಿಯಿಂದ ಪ್ರವಾಹಕ್ಕೊಳಗಾದ ಚಡಚಣ, ಇಂಡಿ ಮತ್ತು ಸಿಂದಗಿ ತಾಲೂಕುಗಳಲ್ಲಿ ಕೃಷಿ, ತೋಟಗಾರಿಕೆ, ಮನೆ ಹಾನಿ ಹಾಗೂ ಮೂಲ ಸೌಕರ್ಯ ಹಾನಿಯಾದ ಬಗ್ಗೆ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದು, ಸಿಂದಗಿ ಸಮೀಪದ ರಾಂಪೂರ ಗ್ರಾಮದಲ್ಲಿ ತೊಗರಿ ಬೆಳೆ ಹಾನಿ ಮತ್ತು ಹತ್ತಿ ಬೆಳೆ ಹಾನಿ ಹಾಗೂ ಕೋರಹಳ್ಳಿಯಲ್ಲಿ ಹತ್ತಿ ಬೆಳೆ ಹಾನಿ ಕುರಿತಂತೆ ಪರಿಶೀಲನೆ ನಡೆಸಿ, ಸಂಬಂಧಿಸಿದ ಅಧಿಕಾರಿಗಳು ಮತ್ತು ರೈತರಿಂದ ಮಾಹಿತಿ ಪಡೆಯಿತು.

ಅ. 13 ಮತ್ತು 14 ರಂದು ಬಾರಿ ಮಳೆಯಾಗಿದ್ದು, ಭೀಮಾ ನದಿಗೂ ಪ್ರವಾಹ ಬಂದಿತ್ತು. ಪ್ರವಾಹದಿಂದಾಗಿ ಚಡಚಣ, ಇಂಡಿ ಹಾಗೂ ಸಿಂದಗಿ ತಾಲ್ಲೂಕುಗಳ 28 ಗ್ರಾಮಗಳು ತೊಂದರೆಗೀಡಾಗಿದ್ದವು. ಇತರ ತಾಲೂಕುಗಳೂ ಕೂಡ ಅತೀವೃಷ್ಟಿಗೆ ತುತ್ತಾಗಿದ್ದು, ಈ ಗ್ರಾಮಗಳಲ್ಲಿ 4041 ಮನೆಗಳಿಗೆ ನೀರು ನುಗ್ಗಿತ್ತು.
ಅತಿವೃಷ್ಟಿ ಮತ್ತು ಪ್ರವಾಹದ ಸಂದರ್ಭದಲ್ಲಿ ವಿಜಯಪುರ ಜಿಲ್ಲೆಯಲ್ಲಿ 12 ಜನ ಸಾವಿಗೀಡಾಗಿದ್ದು, 13 ಜಾನುವಾರುಗಳೂ ಬಲಿಯಾಗಿವೆ. 2,07,146 ಹೆಕ್ಟೇರ್ ಕೃಷಿ ಬೆಳೆ ಹಾನಿಯಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








