ಕಲಬುರಗಿ : ಕೊರೊನಾ ಕಾಟದಿಂದ ರಾಜ್ಯ ತತ್ತರಿಸಿ ಹೋಗಿದೆ. ಹೆಮ್ಮಾರಿ ಸೋಂಕಿನಿಂದಾಗಿ ರಾಜ್ಯ ಸರಕಾರದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಇತನ್ಮಧ್ಯೆ ರಾಜ್ಯದ ಪಾಲಿನ ಜಿಎಸ್ ಟಿ ಪರಿಹಾರದ ಎರಡನೆಯ ಕಂತು ನೀಡಲು ಕೇಂದ್ರ ಸರಕಾರ ನಿರಾಕರಣೆ ಮಾಡಿದೆ. ಈ ವಿಚಾರವಾಗಿ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಅವರು ಪ್ರತಿಕ್ರಿಯೆ ನೀಡಿದ್ದು, ಕೇಂದ್ರವನ್ನು ಪ್ರಶ್ನಿಸುವ ಧೈರ್ಯ ಯಾವೊಬ್ಬ ಸಂಸದರಿಗೆ ಇಲ್ಲವೇ? ಎಂದು ಕುಟುಕಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಗಳನ್ನು ಮಾಡಿರುವ ಪ್ರಿಯಾಂಕ್, ಕೊರೊನಾದಿಂದಾಗಿ ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಇದರ ನಡುವೆ ಕೇಂದ್ರ ಸರ್ಕಾರವು ಜಿಎಸ್ ಟಿ ಪರಿಹಾರದ 2 ಕಂತನ್ನು ರಾಜ್ಯಕ್ಕೆ ನೀಡಲು ಸಾಧ್ಯವಿಲ್ಲ ಎಂದಿದೆ. 15ನೇ ಹಣಕಾಸು ಆಯೋಗದಿಂದ ರಾಜ್ಯದ ತೆರಿಗೆ ಪಾಲಿನಲ್ಲಿ 9,000 ಕೋಟಿ ರೂ. ಖೋತಾ ಮಾಡಿದೆ. ತನ್ನ ಪ್ರಾಯೋಜಿತ ರಾಜ್ಯ ಯೋಜನೆಗಳಿಗೂ ಹಣ ಬಿಡುಗಡೆ ಮಾಡುತ್ತಿಲ್ಲ.
ಈ ಬಗ್ಗೆ ಮುಖ್ಯಮಂತ್ರಿಗಳೂ ಸಹ ಬಜೆಟ್‌ನಲ್ಲಿ ಉಲ್ಲೇಖ ಮಾಡಿದ್ದರು. ರಾಜ್ಯದಿಂದ 25 ಬಿಜೆಪಿ ಸಂಸದರು ಆಯ್ಕೆಯಾಗಿದ್ದಾರೆ. ಈ ವಿಚಾರವಾಗಿ ಕೇಂದ್ರವನ್ನು ಪ್ರಶ್ನಿಸುವ ಧೈರ್ಯ ಯಾರೊಬ್ಬರಿಗೂ ಇಲ್ಲವೇ? ತಮ್ಮ ಸ್ಥಾನಮಾನ ಉಳಿಸಿಕೊಳ್ಳಲು ‘ದೆಹಲಿ ಪೆರೇಡ್’ ಮಾಡುವ ಬಿಜೆಪಿ ನಾಯಕರು, ಅವರಿಗೆ ರಾಜ್ಯದ ಹಕ್ಕಿಗಾಗಿ ಹೋರಾಡೋಕೆ ಪುರಸೊತ್ತಿಲ್ವಾ ಎಂದು ಪ್ರಶ್ನಿಸಿದ್ದಾರೆ.
“ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯದ ಪಾಲನ್ನು ಪಡೆದುಕೊಳ್ಳುವುದು ರಾಜ್ಯ ಸರ್ಕಾರದ ಜವಾಬ್ದಾರಿ. ಆದರೆ ಈ ಬಗ್ಗೆ ತುಟಿಕ್ ಪಿಟಿಟ್ ಎನ್ನದೇ, ಸರ್ಕಾರ ಮತ್ತು ಬಿಜೆಪಿ ನಾಯಕರು ಜನರಿಗೆ ಮೋಸ ಮಾಡುತ್ತಿದ್ದಾರೆ. ಪ್ರಧಾನಿ ಮೋದಿಯರ ಆತ್ಮನಿರ್ಭರ ಹೇಳಿಕೆಯನ್ನು ಪ್ರಸ್ತಾಪಿಸಿ ಪ್ರಿಯಾಂಕ್ ಖರ್ಗೆ ಅವರು ” ನಮಗೆ ಸಲ್ಲಬೇಕಾದ ಹಣ ನೀಡದೇ, ರಾಜ್ಯವನ್ನ ಬೀದಿಯಲ್ಲಿ ಬಿಡುವುದೇ ಆತ್ಮನಿರ್ಭರತೆಯಾ ” ? ಎಂದು ಟ್ವಿಟ್ಟರ್ ನಲ್ಲಿ ವ್ಯಂಗ್ಯವಾಡಿದ್ದಾರೆ.