ರಾಜ್ಯ ಸರ್ಕಾರಕ್ಕೆ ಮಹತ್ವದ ಹಿನ್ನಡೆಯಾಗಿದ್ದು, ದ್ವೇಷ ಭಾಷಣ ಹಾಗೂ ದ್ವೇಷ ಅಪರಾಧ ತಡೆಗೆ ಸಂಬಂಧಿಸಿದ ಮಸೂದೆಗೆ ಕೇಂದ್ರ ಗೃಹ ಸಚಿವಾಲಯ ತಾತ್ಕಾಲಿಕ ಬ್ರೇಕ್ ಹಾಕಿದೆ. ರಾಜ್ಯ ಸರ್ಕಾರ ತರಲು ಮುಂದಾಗಿದ್ದ ಈ ಕಾನೂನು ಕುರಿತು ಕೇಂದ್ರ ಸರ್ಕಾರ ಗಂಭೀರ ಆಕ್ಷೇಪ ವ್ಯಕ್ತಪಡಿಸಿದೆ.
ಈ ಮಸೂದೆಗೆ 2026ರ ಫೆಬ್ರವರಿಯಲ್ಲೇ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅನುಮೋದನೆ ನೀಡಲು ನಿರಾಕರಿಸಿದ್ದರು. ಬಳಿಕ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಅನುಮೋದನೆ ಪಡೆಯಲು ಮಸೂದೆಯನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ಕಳುಹಿಸಲಾಗಿತ್ತು.
ಈಗ ಗೃಹ ಸಚಿವಾಲಯ, ಪ್ರಸ್ತುತ ದೇಶದಲ್ಲಿ ಜಾರಿಯಲ್ಲಿರುವ ಕಾನೂನು ವ್ಯವಸ್ಥೆಯೇ ದ್ವೇಷ ಭಾಷಣ ಹಾಗೂ ದ್ವೇಷ ಅಪರಾಧಗಳನ್ನು ತಡೆಯಲು ಸಾಕಷ್ಟು ಸಮರ್ಪಕವಾಗಿದೆ. ಹೀಗಾಗಿ ಹೊಸ ಕಾನೂನು ಅಗತ್ಯವಿಲ್ಲದಿರಬಹುದು ಎಂದು ರಾಜ್ಯ ಸರ್ಕಾರಕ್ಕೆ ಅಭಿಪ್ರಾಯ ತಿಳಿಸಿದೆ.
ಈ ಬೆಳವಣಿಗೆ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ರಾಜಕೀಯವಾಗಿ ಹಿನ್ನಡೆಯಾಗಿ ಪರಿಣಮಿಸಿದ್ದು, ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಮತ್ತೊಂದೆಡೆ, ಸಮಾಜದಲ್ಲಿ ಹೆಚ್ಚುತ್ತಿರುವ ದ್ವೇಷ ಭಾಷಣಗಳನ್ನು ನಿಯಂತ್ರಿಸಲು ಹೊಸ ಕಾನೂನು ಅಗತ್ಯವಿದೆ ಎಂದು ಕಾಂಗ್ರೆಸ್ ನಾಯಕರು ವಾದಿಸುತ್ತಿದ್ದಾರೆ.








