ಬಾಗಲಕೋಟೆ: ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರ ವಶದಲ್ಲಿರುವ ಚೈತ್ರಾ ಕುಂದಾಪುರ ಪ್ರಕರಣ ಬಗೆದಷ್ಟು ಹಿಗ್ಗುತ್ತಿದೆ.
ಚೈತ್ರಾಳ ಪ್ರಕರಣ ಸದ್ದು ಮಾಡುತ್ತಿದ್ದಂತೆ ಆರೋಪಿ ಶ್ರೀಕಾಂತ್, ಕಿರಣ್‍ಗೆ (Kiran) ಕರೆ ಮಾಡಿ, ಕಾರು ಮಹಾರಾಷ್ಟ್ರದ ಸೊಲ್ಲಾಪುರದಲ್ಲಿದೆ. ಅದು ಸೊಲ್ಲಾಪುರದ ಬಾರ್ ಆ್ಯಂಡ್ ರೆಸ್ಟೊರೆಂಟ್ ಮುಂದೆ ಇದೆ. ಅದನ್ನು ನಿಮ್ಮ ಬಳಿ ಇಟ್ಟುಕೊಳ್ಳಿ ಎಂದು ಹೇಳಿರುವುದು ಬಯಲಿಗೆ ಬಂದಿದೆ.
ಶ್ರೀಕಾಂತ್ ಹೇಳಿದಂತೆ ಕಿರಣ್ ಅವರು ಸೆಪ್ಟೆಂಬರ್ 9 ರಂದು ಸೊಲ್ಲಾಪುರಕ್ಕೆ ತೆರಳಿ ಕಿಯಾ ಕಾರೆನ್ಸ್ (Kia Carens) ತಂದು ತಮ್ಮ ಡ್ರೈವಿಂಗ್ ಸ್ಕೂಲ್‍ನಲ್ಲಿಟ್ಟುಕೊಂಡಿದ್ದರು. ಚೈತ್ರಾ ಕುಂದಾಪುರ, ಪಿಎ ಶ್ರೀಕಾಂತ್, ಕಿರಣ್ ಕರೆಯನ್ನು ಸಿಸಿಬಿ ಪೊಲೀಸರು ಟ್ರೇಸೌಟ್ ಮಾಡಿದ್ದಾರೆ. ಈ ಆಧಾರದ ಮೇಲೆ ಕಿರಣ್ ವಶಕ್ಕೆ ಪಡೆದು ಕಾರು ಜಪ್ತಿ ಮಾಡಿ ವಿಚಾರಣೆಗ ನಡೆಸುತ್ತಿದ್ದಾರೆ.
ಕಿರಣ್ ಗಣಪ್ಪಗೊಳ ಹಿಂದೂ ಕಾರ್ಯಕರ್ತ. ಇವರು ಡ್ರೈವಿಂಗ್ ಸ್ಕೂಲ್ ಇಟ್ಟುಕೊಂಡಿದ್ದಾರೆ. ಮೊದಲು ಕಿರಣ್ ತಂದೆ ಭೀಮಶಿ ಡ್ರೈವಿಂಗ್ ಸ್ಕೂಲ್ ನಡೆಸುತ್ತಿದ್ದರು. ಹಲವಾರು ವರ್ಷಗಳಿಂದ ಮಗ ಕಿರಣ್ ಸ್ಕೂಲ್ ನೋಡಿಕೊಳ್ಳುತ್ತಿದ್ದಾರೆ. ಹಿಂದೂಪರ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ಕಾರಣ ಮೂರು ಬಾರಿ ಮುಧೋಳ ನಗರಕ್ಕೆ ಚೈತ್ರಾ ಕುಂದಾಪುರರನ್ನು ಭಾಷಣಕ್ಕೆ ಕರೆಸಿದ್ದರು. ಹೀಗಾಗಿ ಇವರ ಪರಿಚಯವಾಗಿತ್ತು ಎನ್ನಲಾಗಿದೆ.