ಚಾಮರಾಜನಗರದ ಘಟನೆ ಸರ್ಕಾರಿ ಪ್ರಯೋಜಿತ ಹತ್ಯಾಕಾಂಡ
ಬೆಂಗಳೂರು :ಚಾಮರಾಜನಗರದ ದುರಂತಕ್ಕೆ ಕಾರಣ ಯಾರು ಎಂದು ಬಿಡಿಸಿ ಹೇಳಬೇಕಿಲ್ಲ. ಇದು ಸರ್ಕಾರಿ ಪ್ರಾಯೋಜಿತ ಹತ್ಯಾಕಾಂಡವಾಗಿದೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸರ್ಕಾರಕ್ಕೆ ಚಾಟಿ ಬಿಸಿದ್ದಾರೆ.
ಚಾಮರಾಜನಗರ ಘಟನೆ ಬಗ್ಗೆ ಸರಣಿ ಟ್ವೀಟ್ ಗಳನ್ನು ಮಾಡಿರುವ ಅವರು, ಆಕ್ಸಿಜನ್ ಪೂರೈಕೆಯಾಗದೇ ಚಾಮರಾಜನಗರದಲ್ಲಿ ಒಂದೇ ದಿನ 24 ಜನ ಸಾವಿಗೀಡಾಗಿರುವುದು ಅತ್ಯಂತ ದೊಡ್ಡ ದುರಂತ. ಆಕ್ಸಿಜನ್ ಪೂರೈಸದ ರಾಜ್ಯ ಸರ್ಕಾರ ಈ ಸಾವಿನ ನೇರ ಹೊಣೆ ಹೊರಬೇಕು. ಜನ ಬೀದಿ ಬೀದಿಯಲ್ಲಿ ಸಾಯುತ್ತಿದ್ದರೂ ಈ ಸರ್ಕಾರ ಕರುಣೆ ಇಲ್ಲದಂತೆ ವರ್ತಿಸುತ್ತಿದೆ. ಇಂತಹ ಹೃದಯಹೀನ ಸರ್ಕಾರ ರಾಜ್ಯಕ್ಕೆ ಬೇಕೆ? ಎಂದು ಪ್ರಶ್ನಿಸಿದ್ದಾರೆ.
ಪ್ರತಿ ಜಿಲ್ಲಾಸ್ಪತ್ರೆಗೂ ಆಕ್ಸಿಜನ್ ಪೂರೈಸುವ ಜವಾಬ್ಧಾರಿ ಸರ್ಕಾರದ ಮೇಲಿದೆ. ಆದರೆ ಆಕ್ಸಿಜನ್ ಇರಲಿ,ರೋಗಿಗಳಿಗೆ ಒಂದು ಬೆಡ್ ಕೊಡುವ ಯೋಗ್ಯತೆಯೂ ಈ ಸರ್ಕಾರಕ್ಕಿಲ್ಲ. ಆಕ್ಸಿಜನ್ ಗಾಗಿ ಮನವಿ ಸಲ್ಲಿಸಿದ್ದರೂ ಸರ್ಕಾರ ಚಾಮರಾಜನಗರಕ್ಕೆ ಆಕ್ಸಿಜನ್ ನೀಡದೆ ಜನರ ಸಾಮೂಹಿಕ ಹತ್ಯೆ ನಡೆಸಿದೆ. ಈ ದುಷ್ಟ ಸರ್ಕಾರ ಇನ್ನೆಷ್ಟು ಜನರ ಬಲಿಗೆ ಕಾಯುತ್ತಿದೆ? ಆಡಳಿತ ಸರ್ಕಾರದ ವಿರುದ್ಧವಾಗಿ ಕಿಡಿಕಾರಿದ್ದಾರೆ.
ಚಾಮರಾಜನಗರದ ದುರಂತಕ್ಕೆ ಕಾರಣ ಯಾರು ಎಂದು ಬಿಡಿಸಿ ಹೇಳಬೇಕಿಲ್ಲ. ಇದು ಸರ್ಕಾರಿ ಪ್ರಾಯೋಜಿತ ಹತ್ಯಾಕಾಂಡವಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ, ಆರೋಗ್ಯ ಸಚಿವರಾದ ಸುಧಾಕರ್ ವೈಫಲ್ಯಕ್ಕೆ 24 ಜನರು ಅನ್ಯಾಯವಾಗಿ ಸಾವಿಗೀಡಾಗಿದ್ದಾರೆ. ರಾಜ್ಯದ ಜನ ಕೊಲೆ ಪಾತಕ ಸರ್ಕಾರದ ದುಷ್ಟ ಆಡಳಿತಕ್ಕೆ ಪ್ರತ್ಯಕ್ಷ ಸಾಕ್ಷಿಯಾಗ್ತಿದ್ದಾರೆ ಎಂದು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ.