ಚಾಮರಾಜನಗರದಲ್ಲಿ 24 ಮಂದಿ ಸಾವಿಗೆ ಆಕ್ಸಿಜನ್ ಕೊರತೆ ಕಾರಣ
ಚಾಮರಾಜನಗರ : ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಅಧೀನದ ಜಿಲ್ಲಾಸ್ಪತ್ರೆಯಲ್ಲಿ ಮೇ 2 ರ ಮಧ್ಯರಾತ್ರಿ ಸಂಭವಿಸಿದ 24 ಜನರ ಸಾವಿಗೆ ಆಮ್ಲಜನಕ ಕೊರತೆಯೇ ಕಾರಣ ಎಂದು ಹೈಕೋರ್ಟ್ ನೇಮಿಸಿದ್ದ ಮೂವರು ಸದಸ್ಯರ ಸಮಿತಿ ವರದಿ ಸಲ್ಲಿಸಿದೆ ಎಂದು ಮಾಜಿ ಸಂಸದ ಆರ್.ಧೃವನಾರಾಯಣ್ ತಿಳಿಸಿದ್ದಾರೆ.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚಾಮರಾಜನಗರ ಕೋವಿಡ್ ಆಸ್ಪತ್ರೆಯಲ್ಲಿ 24 ಸೋಂಕಿತರ ಸಾವಿನ ಪ್ರಕರಣದಲ್ಲಿ ಆಕ್ಸಿಜನ್ ಕೊರತೆ ಇತ್ತು ಸಂದರ್ಭಕ್ಕೆ ತಕ್ಕಂತೆ ನಾಯಕತ್ವ ಮತ್ತು ಕ್ರಿಯಾಶೀಲತೆ ತೋರಿಸುವಲ್ಲಿ ಚಾಮರಾಜನಗರ ಜಿಲ್ಲಾಧಿಕಾರಿ ವಿಫಲವಾಗಿದ್ದಾರೆ ಎಂದು ಹೈಕೊರ್ಟ್ ನ್ಯಾಯಮೂರ್ತಿಗಳ ತನಿಖಾ ತಂಡ ವರದಿಯಲ್ಲಿ ಸ್ಪಷ್ಟಪಡಿಸಿದೆ.
ಕಳೆದ ಮೇ 2ರಂದು ರಾತ್ರಿ 10.30 ರಿಂದ ಮೇ 3 ರ ಮುಂಜಾನೆ 2.20 ತನಕ ಕೋವಿಡ್ ಆಸ್ಪತ್ರೆಯಲ್ಲಿ ಆಮ್ಲಜನಕವೇ ಲಭ್ಯವಿರಲಿಲ್ಲ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ.ಎನ್.ವೇಣುಗೋಪಾಲಗೌಡ ನೇತೃತ್ವದ ಕಾನೂನು ಸೇವೆಗಳ ಪ್ರಾಧಿಕಾರದ ಸಮಿತಿ ಅಭಿಪ್ರಾಯಪಟ್ಟಿದ್ದು, ಮೃತಪಟ್ಟವರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಸಮಿತಿ ಶಿಫಾರಸು ಮಾಡಿದೆ ಎಂದು ವಿವರಿಸಿದರು.
24 ವ್ಯಕ್ತಿಗಳಿಗೆ ಸಂಬಂಧಿಸಿದಂತೆ ಜಿಲ್ಲಾ ಶಸ್ತ್ರಚಿಕಿತ್ಸಕ ಮತ್ತು ಇತರ ನಾಲ್ವರನ್ನು ಒಳಗೊಂಡ ಸಮಿತಿ ನಡೆಸಿದ ವರದಿಯನ್ನೂ ಸಮಿತಿ ವಿಶ್ಲೇಷಿಸಿದೆ. ಆಮ್ಲಜನಕದ ಕೊರತೆಯಿಂದ ಮೂವರು, ಮೆದುಳಿಗೆ ಆದ ಗಾಯದಿಂದ 7 ಮಂದಿ ಮತ್ತು ಕೋವಿಡ್ ಕಾರಣದಿಂದ 14 ಮಂದಿ ಮೃತಪಟ್ಟಿದ್ದಾರೆ ಎಂದು ಆ ಸಮಿತಿಯ ವರದಿ ಹೇಳಿದೆ.
ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೋಂಕಿತರಿಗೆ ಸರಿಯಾದ ಸಮಯದಲ್ಲಿ ಆಮ್ಲಜನಕದ ಅಗತ್ಯವಿತ್ತು. ಆದರೆ, ಆಸ್ಪತ್ರೆಯಲ್ಲಿ ಆಮ್ಲಜನಕ ಪೂರೈಕೆಯೇ ಇರಲಿಲ್ಲ. ಮೃತಪಟ್ಟವರ ಕೇಸ್ ಶೀಟ್ಗಳನ್ನು ಗಮನಿಸಿದರೆ ಅವರಿಗೆ ಆಮ್ಲಜನಕದ ಅಭಾವ ಇತ್ತು ಎಂಬುದನ್ನು ಸೂಚಿಸುತ್ತದೆ. ಆಮ್ಲಜನಕ ಕೊರತೆ ಕಾರಣಕ್ಕೆ ಮೆದುಳಿನ ಕೋಶಗಳಿಗೆ ಹಾನಿಯಾಗಿದೆ’ ಎಂದು ಹೈಕೋರ್ಟ್ ನೇಮಿಸಿದ್ದ ಸಮಿತಿ ಅಭಿಪ್ರಾಯಪಟ್ಟಿದೆ ಎಂದು ಮಾಜಿ ಸಂಸದ ಆರ್. ದೃವನಾರಾಯಣ್ ಹೇಳಿದರು.
ಮೈಸೂರಿನಲ್ಲಿನ ಆಮ್ಲಜನಕ ಸಿಲಿಂಡರ್ ಮರುಪೂರಣ ಘಟಕದಿಂದ ಆಸ್ಪತ್ರೆಗೆ ಆಮ್ಲಜನಕ ಸರಬರಾಜು ಮಾಡಿಕೊಳ್ಳುವುದು ಜಿಲ್ಲಾಡಳಿತ ಮತ್ತು ಆಸ್ಪತ್ರೆ ಅಧಿಕಾರಿಗಳ ಜವಾಬ್ದಾರಿ. ಆಸ್ಪತ್ರೆಯ ಆಡಳಿತ ಜಾಗರೂಕರಾಗಿದ್ದರೆ, ಪೂರೈಕೆದಾರರು ಸಮಯೋಚಿತವಾಗಿ ಮರುಪೂರಣಗೊಳಿಸಿದ್ದರೆ ಸಾಕಷ್ಟು ಆಮ್ಲಜನಕ ಸಂಗ್ರಹಿಸಬಹುದಿತ್ತು. ಅದನ್ನು ಮಾಡದೆ ಇರುವುದು ಅಮೂಲ್ಯ ಜೀವಗಳ ಹಾನಿಗೆ ಕಾರಣವಾಗಿದೆ ಎಂದು ವರದಿ ಹೇಳಿದೆ ಎಂದರು.