ಪ್ಯಾರಿಸ್: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಭಾರತದ (India) ವೇಟ್ ಲಿಫ್ಟರ್ ಮೀರಾಬಾಯಿ ಚಾನು (Mirabai Chanu) ಕಂಚಿನ ಪದಕದಿಂದಲೂ ವಂಚಿತರಾಗಿದ್ದಾರೆ.
ಮಹಿಳೆಯರ 49 ಕೆಜಿ ವಿಭಾಗದಲ್ಲಿ ಒಟ್ಟು 199 ಕೆಜಿ (88+111) ಎತ್ತುವ ಮೂಲಕ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ. ಸ್ನ್ಯಾಚ್ ನ ಮೊದಲ ಯತ್ನದಲ್ಲಿ 85 ಕೆಜಿಯನ್ನು ಸುಲಭವಾಗಿ ಎತ್ತಿದ ಅವರು ಎರಡನೇ ಪ್ರಯತ್ನದಲ್ಲಿ 88 ಕೆ.ಜಿ ತೂಕವನ್ನು ಎತ್ತುವಲ್ಲಿ ವಿಫಲರಾದರು. ಮೂರನೇ ಪ್ರಯತ್ನದಲ್ಲಿ 88 ಕೆ.ಜಿಗಳ ಬೆಸ್ಟ್ ಲಿಫ್ಟ್ ಮೂಲಕ ಕಂಚಿನ ಪದಕದ ಸ್ಥಾನದಲ್ಲಿ ಉಳಿದಿದ್ದರು.
ಕ್ಲೀನ್ ಆಂಡ್ ಜರ್ಕ್‌ನಲ್ಲಿ ಮೊದಲ ಯತ್ನದಲ್ಲಿ 111 ಕೆಜಿ ಎತ್ತಲು ಮೀರಾಬಾಯ ಮುಂದಾಗಿದ್ದರು. ಆದರೆ ಮೊದಲ ಪ್ರಯತ್ನದಲ್ಲಿ ವಿಫಲರಾಗಿದ್ದರು. ಎರಡನೇ ಪ್ರಯತ್ನದಲ್ಲಿ 111 ಕೆಜಿ ಎತ್ತುವಲ್ಲಿ ಸಫಲರಾದರು. ಆದರೆ ಪ್ರತಿಸ್ಪರ್ಧಿಗಳು ಹೆಚ್ಚಿನ ಭಾರ ಎತ್ತಿದ ಪರಿಣಾಮ ಮೀರಾಬಾಯಿ ಚಾನು ನಾಲ್ಕನೇ ಸ್ಥಾನ ಪಡೆಯುವಂತಾಯಿತು. ಅಂತಿಮವಾಗಿ ಕ್ಲೀನ್ ಮತ್ತು ಜರ್ಕ್ ನಲ್ಲಿ 111 ಹಾಗೂ ಸ್ನ್ಯಾಷ್ ನಲ್ಲಿ 88 ಕೆಜಿ ಸೇರಿಸಿ ಒಟ್ಟು 199 ಕೆ.ಜಿ ಲಿಫ್ಟ್ ಮಾಡಿದ್ದಾರೆ. ಹೀಗಾಗಿ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಡುವಂತಾಯಿತು.,
ಚೀನಾದ ವೇಟ್ ಲಿಫ್ಟರ್ ಜಿಹುಯಿ ಅವರು 206 ಕೆಜಿ ಎತ್ತಿ ನೂತನ ಒಲಿಂಪಿಕ್ಸ್ ದಾಖಲೆ ನಿರ್ಮಿಸಿದ್ದಾರೆ. ಸ್ನ್ಯಾಷ್ ಒಟ್ಟು 89 ಎತ್ತಿದ್ದರು. ಅಲ್ಲದೆ ಇವರು ಕ್ಲೀನ್ ಆಂಡ್ ಜರ್ಕ್ ನಲ್ಲಿ 117 ಕೆ.ಜಿ ಭಾರ ಎತ್ತಿ ಚಿನ್ನಕ್ಕೆ ಮುತ್ತಿಕ್ಕಿದ್ದಾರೆ. ರೊಮೇನಿಯಾದ ವ್ಯಾಲಂಟಿನಾ 205 ಕೆಜಿ ಎತ್ತಿ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದರೆ, ಥಾಯ್ಲೆಂಡಿನ ಸುರೋದ್ಚನಾ 200 ಕೆಜಿ ಎತ್ತಿ ಕಂಚು ಗೆದ್ದಿದ್ದಾರೆ.