ಚಾರ್ಧಾಮ್ ರಸ್ತೆ ನಿರ್ಮಾಣಕ್ಕೆ ಹಸಿರು ನಿಶಾನೆ ತೊರಿದ ಸುಪ್ರೀಂ ಕೋರ್ಟ್
ಚಾರ್ಧಾಮ್ ಯೋಜನೆಗೆ ಹಸಿರು ನಿಶಾನೆ: ದ್ವಿಪಥ ರಸ್ತೆ ನಿರ್ಮಾಣಕ್ಕೆ ಸುಪ್ರೀಂ ಒಪ್ಪಿಗೆ, ಚೀನಾ ಗಡಿ ತಲುಪಲು ಸೇನೆಗೆ ಸುಲಭ ಪ್ರವೇಶ ದೊರಕಲಿದೆ.
ಚಾರ್ಧಾಮ್ ರಸ್ತೆ ಯೋಜನೆಯಡಿ ದ್ವಿಪಥ ರಸ್ತೆ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ಅನುಮೋದನೆ ನೀಡಿದೆ. ಸೇನಾ ಪಡೆಗಳು ಮತ್ತು ಅದರ ಕಾರ್ಯತಂತ್ರಗಳನ್ನ ಗಮನದಲ್ಲಿಟ್ಟುಕೊಂಡು ಎರಡು ಪಥದ ರಸ್ತೆ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ಹಸಿರು ನಿಶಾನೆ ತೋರಿಸಿದೆ. ಈ ಪ್ರದೇಶದಲ್ಲಿನ ರಸ್ತೆಗಳು ಗಡಿ ರಕ್ಷಣಗೆ ಆಯಕಟ್ಟಿನ ಪ್ರಾಮುಖ್ಯತೆಯನ್ನು ಹೊಂದಿವೆ ಎಂಬ ಸರ್ಕಾರದ ವಾದವನ್ನು ನ್ಯಾಯಾಲಯವು ಒಪ್ಪಿಕೊಂಡಿದೆ. ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯ ಭದ್ರತೆಗೆ ಗಂಭೀರ ಸವಾಲುಗಳು ಎದುರಾಗಿವೆ. ಅಂತಹ ಪರಿಸ್ಥಿತಿಯಲ್ಲಿ, ಸೈನಿಕರು ಮತ್ತು ಶಸ್ತ್ರಾಸ್ತ್ರಗಳ ಸರಬರಾಜು ಸುಲಭವಾಗಿರಬೇಕು ಎಂದು ಕೋರ್ಟ್ ಅಭಿಪ್ರಾಯ ಪಟ್ಟಿದೆ.
ರಸ್ತೆ ನಿರ್ಮಾಣಕ್ಕಾಗಿ ಸಾವಿರ ಮರಗಳನ್ನು ಕಡಿಯಲಾಗುತ್ತಿದ್ದು ಇದಕ್ಕೆ ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. 26 ಸೆಪ್ಟೆಂಬರ್ 2018 ರ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (NGT) ಆದೇಶದ ನಂತರ ಸಿಟಿಜನ್ ಫಾರ್ ಗ್ರೀನ್ ಡೂನ್ ಬೇವಿನ NGO ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು.
ಕೆಲ ದಿನಗಳ ಹಿಂದಷ್ಟೇ ಕೇಂದ್ರ ಸರ್ಕಾರ ಮುಚ್ಚಿದ ಲಕೋಟೆಯಲ್ಲಿ ಪತ್ರವನ್ನ ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಅದರಲ್ಲಿ ಚೀನಾ ನಿರ್ಮಾಣದ ಚಿತ್ರಗಳಿದ್ದವು. ಸರ್ಕಾರದ ಪರವಾಗಿ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಮಾತನಾಡಿ – ಚೀನಾದ ಕಡೆಯಿಂದ ಏರ್‌ಸ್ಟ್ರಿಪ್‌ಗಳು, ಹೆಲಿಪ್ಯಾಡ್‌ಗಳು, ಟ್ಯಾಂಕ್‌ಗಳು, ಸೈನಿಕರಿಗೆ ಕಟ್ಟಡಗಳು ಮತ್ತು ರೈಲು ಮಾರ್ಗಗಳನ್ನು ನಿರ್ಮಿಸಲಾಗುತ್ತಿದೆ. ಟ್ಯಾಂಕ್‌ಗಳು, ರಾಕೆಟ್ ಲಾಂಚರ್‌ಗಳು ಮತ್ತು ಫಿರಂಗಿಗಳನ್ನು ಸಾಗಿಸುವ ಟ್ರಕ್‌ಗಳು ಈ ರಸ್ತೆಗಳ ಮೂಲಕ ಹಾದುಹೋಗಬೇಕಾಗಬಹುದು, ಆದ್ದರಿಂದ ರಸ್ತೆಯ ಅಗಲಿಕರಣ ಮಾಡಬೇಕಾಗಿದೆ ಎಂದು ತಿಳಿಸಿದರು.
1962ರ ಭಾರತ-ಚೀನಾ ಯುದ್ಧದ ಕುರಿತು ನ್ಯಾಯಾಲಯಕ್ಕೆ ನೆನಪಿಸಿದ ವೇಣುಗೋಪಾಲ್, 1962ರಲ್ಲಿ ಏನಾಯಿತು ಎಂಬುದು ನ್ಯಾಯಾಲಯಕ್ಕೆ ಗೊತ್ತಿದೆ ಎಂದು ಹೇಳಿದ್ದರು. ನಾವು ಸಶಸ್ತ್ರ ಪಡೆಗಳು ಪರಿಸ್ಥಿತಿಯನ್ನು ಗಂಭೀರವಾಗಿ ಗಮನಿಸಬೇಕು. ನಮ್ಮ ಸೈನಿಕರು ಗಡಿಯವರೆಗೂ ನಡೆದುಕೊಂಡು ಹೋಗಬೇಕಿತ್ತು ಅದನ್ನ ತಪ್ಪಿಸಲು ಈ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಚಾರ್‌ಧಾಮ್ ಪ್ರಾಜೆಕ್ಟ್ ಗುಡ್ಡಗಾಡು ರಾಜ್ಯ ಯಮುನೋತ್ರಿ, ಗಂಗೋತ್ರಿ, ಕೇದಾರನಾಥ ಮತ್ತು ಬದರಿನಾಥದ ನಾಲ್ಕು ಪವಿತ್ರ ಸ್ಥಳಗಳನ್ನು ಎಲ್ಲಾ ಹವಾಮಾನದಲ್ಲಿ ಸಂಪರ್ಕಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯು ಪೂರ್ಣಗೊಂಡ ನಂತರ, ಪ್ರತಿ ಋತುವಿನಲ್ಲಿ ಚಾರ್ಧಾಮ್ ಯಾತ್ರೆಯನ್ನು ಮಾಡಬಹುದು. ಈ ಯೋಜನೆಯಡಿ 900 ಕಿ.ಮೀ ಉದ್ದದ ರಸ್ತೆ ನಿರ್ಮಿಸಲಾಗುತ್ತಿದೆ. ಇಲ್ಲಿಯವರೆಗೆ 400 ಕಿ.ಮೀ ರಸ್ತೆ ವಿಸ್ತರಣೆಯಾಗಿದೆ.