ಮಲೆನಾಡಿನ ನಾಗರಹಳ್ಳಿಯ ಅಮೋಘ ವಿನೂತನ ಚತುರ್ಮುಖ ಶಿಲಾಶಾಸನದ ವಿವರಣೆಯ ಕೌತುಕದ ಸಂಗತಿಗಳು: Saakshatv Naavu kelada charitre episode14
ನಮ್ಮ ಮಲೆನಾಡು ಬೇರೆ ಬೇರೆ ಕಾಲಮಾನದಲ್ಲಿ ನೇರವಾಗಿ ಮತ್ತು ಪರೋಕ್ಷವಾಗಿ ಕದಂಬ, ವರ್ಧನ, ಆಳುಪ, ರಾಷ್ಟ್ರಕೂಟ, ಚಾಳುಕ್ಯ, ಸಾಂತಳಿಗೆ ಚಾಳುಕ್ಯ, ಗಂಗರು, ಸಾಂತರು, ಹೊಯ್ಸಳ, ಸೇಉಣ (ಯಾದವ), ಪಲ್ಲವ – ಕಾಡವ, ವಿಜಯನಗರ, ಕೆಳದಿ ಮತ್ತು ಮೈಸೂರಿನ ಅರಸರ ಆಡಳಿತಕ್ಕೆ ಒಳಪಟ್ಟಿತ್ತು. Saakshatv Naavu kelada charitre episode14
ಇನ್ನೂ ನಮ್ಮ ಶಿವಮೊಗ್ಗಕ್ಕೆ ಸಂಬಂಧಿಸಿದಂತೆ ಮಲೆನಾಡಿನ ತೀರ್ಥಹಳ್ಳಿ ಮತ್ತು ಹೊಸನಗರ ವಿಜಯನಗರ ಸಾಮ್ರಾಜ್ಯದ ಬಹು ಮುಖ್ಯ ಭಾಗವಾಗಿತ್ತು. ಅಂದಿನ ಕಾಲಘಟ್ಟದಲ್ಲಿ ಕರಾವಳಿ ಮತ್ತು ಮಲೆನಾಡನ್ನು ಆರಗದಿಂದ ನಿಯಂತ್ರಿಸಲು ಒಬ್ಬ ರಾಜ್ಯಪಾಲರನ್ನು ನೇಮಿಸಲಾಗಿತ್ತು. ವಿಜಯನಗರಕ್ಕೆ ಅತಿ ಹೆಚ್ಚು ಆದಾಯ ತರುತ್ತಿದ್ದ ಈ ಪ್ರದೇಶದ ರಾಜ್ಯಪಾಲರನ್ನಾಗಿ ಬಹುಪಾಲು ವಿಜಯನಗರದ ರಾಯರ ವಂಶಸ್ಥರನ್ನೇ ನೇಮಿಸಲಾಗುತ್ತಿತ್ತು. ಇನ್ನೂ ಮಲೆನಾಡಿನ ಪರಿಸರದಲ್ಲಿ ತಯಾರಾಗುತ್ತಿದ್ದ ಅತ್ಯಾಧುನಿಕ ತಂತ್ರಜ್ಞಾನದ ಆಯುಧಗಳು ವಿಜಯನಗರ ರಾಯರಿಗೆ ಸಾಕಷ್ಟು ಯುದ್ಧಗಳಲ್ಲಿ ಜಯವನ್ನು ತಂದುಕೊಟ್ಟಿತ್ತು. ವಿಜಯನಗರ ರಾಯರ ಆಳ್ವಿಕೆಯ ಕಾಲದಲ್ಲಿ ಮಲೆನಾಡಿನ ಪರಿಸರದಲ್ಲಿ ಬೇರೆ ಬೇರೆ ಲಕ್ಷಣವುಳ್ಳ ಲೋಹಗಳಿಗಾಗಿ ಹಲವಾರು ಸ್ಥಳಗಳಲ್ಲಿ ಗಣಿಗಾರಿಕೆ ಮಾಡಲಾಗುತ್ತಿತ್ತು.
ವಿಜಯನಗರ ಸಾಮ್ರಾಜ್ಯದ ಪತನದ ನಂತರ ಕೆಳದಿ ಅದರ ಮುಂದುವರಿದ ಭಾಗವಾಗಿ ಹೊರಹೊಮ್ಮುತ್ತದೆ. ವಿಜಯನಗರದ ರಾಯರು ನಡೆಸಿಕೊಂಡು ಬಂದ ಪರಂಪರೆ, ಸಂಸ್ಕೃತಿ, ನೀರಾವರಿ ಪದ್ಧತಿ, ವ್ಯವಹಾರ, ಗಣಿಗಾರಿಕೆ ಹೀಗೆ ಎಲ್ಲವನ್ನೂ ಸಹ ಕೆಳದಿ ನಾಯಕರು ಸಮರ್ಥವಾಗಿ ಮುಂದುವರಿಸುತ್ತಾರೆ. ನಮ್ಮ ತೀರ್ಥಹಳ್ಳಿ ಮತ್ತು ಹೊಸನಗರ ತಾಲೂಕಿನ ಮಧ್ಯದಲ್ಲಿ ಇರುವ ಐತಿಹಾಸಿಕ ಹುಗುಡಿ ಗುಡ್ಡ ಮತ್ತು ಅದರ ಪರಿಸರ ಸಹಾ ವಿಜಯನಗರ ಕಾಲದಲ್ಲಿ ಬಹಳ ಪ್ರಮುಖವಾಗಿತ್ತು. ಹುಗುಡಿ ಗುಡ್ಡದ ಸುತ್ತಲೂ ಇರುವ ಸುನ್ನದಕಲ್ಲು, ಗೇರ್ ಗಲ್ಲು, ಕಡಸೂರು, ಕರಿಗರೆಸು ಮತ್ತು ನಾಗರಹಳ್ಳಿಯ ಪ್ರದೇಶಕ್ಕೆ ಸಂಬಂಧಿಸಿದಂತೆ ರೋಚಕವಾದ ಇತಿಹಾಸ ಇದೆ. ಗೇರ್ ಗಲ್ಲಿನ ವಿಜಯನಗರ ಕಾಲದ ಅತಿ ಪುರಾತನ ಗಣೇಶನ ವಿಗ್ರಹ ಈ ಇತಿಹಾಸಕ್ಕೆ ಸಾಕ್ಷಿ ಎಂಬಂತೆ ಇಂದಿಗೂ ಸಹಾ ಏಕಾಂಗಿ ಆಗಿ ನಿಂತಿದೆ. ಇವೆಲ್ಲಕ್ಕಿಂತ ಹೆಚ್ಚು ವಿಭಿನ್ನವಾಗಿರುವುದು ನಾಗೇಂದ್ರ ಸ್ವಾಮಿಯ ಕ್ಷೇತ್ರವಾಗಿರುವ ನಾಗರಹಳ್ಳಿಯಲ್ಲಿ ಇರುವ ಅಮೋಘ ಚತುರ್ಮುಖ ಶಿಲಾಶಾಸನ ಮತ್ತು ಅದರ ಕೆತ್ತನೆ.
ಕೆಲವು ವರ್ಷಗಳ ಹಿಂದೆ ನನ್ನ ಹಿರಿಯರು ಹಾಗೂ ಗುರುಗಳು ಆಗಿರುವ ಡಾ ಜಗದೀಶ್ ಅಗಸಿಬಾಗಿಲು ಅವರು ಈ ಅಪ್ರಕಟಿತ ಶಾಸನವನ್ನು ಕರ್ನಾಟಕ ಇತಿಹಾಸ ಅಕಾಡೆಮಿಯ ವಾರ್ಷಿಕ ಸಮ್ಮೇಳನದಲ್ಲಿ ಸಮರ್ಥವಾಗಿ ಮಂಡಿಸಿದ್ದಾರೆ. ಡಾ ಜಗದೀಶ್ ಅವರ ಪ್ರಕಾರ ಈ ಶಾಸನ ಸಾಂತರ ಒಂದನೆಯ ಒಡ್ಡುಗನದ್ದಾಗಿದ್ದು ಇದು ದೀರ್ಘಚತುರಸ್ರ ಆಕಾರದಲ್ಲಿದೆ. ಸುಮಾರು ಎರಡು ಅಡಿ ಅಗಲ, ಒಂದು ಅಡಿ ದಪ್ಪ ಮತ್ತು ನಾಲ್ಕು ಅಡಿ ಎತ್ತರವಿರುವ ಈ ಶಾಸನದ ನಾಲ್ಕೂ ಮುಖದಲ್ಲಿ ಶಾಸನವಿರುವುದು ಬಹಳ ವಿನೂತನ. ಸ್ವಲ್ಪ ಭಾಗ ಮಣ್ಣಿನಲ್ಲಿ ಹೂತು ಹೋಗಿದ್ದು ಮುಂಭಾಗದಲ್ಲಿ ಇನ್ನೂ ಎರಡು ಮೂರು ಸಾಲು ಇರುವ ಸಾಧ್ಯತೆ ಇದೆ ಎಂದು ಡಾ ಜಗದೀಶ್ ಅವರು ಅಭಿಪ್ರಾಯ ಪಡುತ್ತಾರೆ. ಶಾಸನ ಮುಂಭಾಗದಲ್ಲಿ ಮೂರು ಪಟ್ಟಿಕೆಗಳಿದ್ದು ಮೊದಲನೆಯ ಪಟ್ಟಿಕೆಯಲ್ಲಿ ಮೂರು ಹೆಡೆಯ ಹಾವು, ಸೂರ್ಯ, ಚಂದ್ರ, ಹಸು ಕರು ಮತ್ತು ಬಲಕ್ಕೆ ಮುಖ ಮಾಡಿರುವ ಎರಡು ಮೀನುಗಳಿವೆ. ಎರಡನೆಯ ಪಟ್ಟಿಕೆಯಲ್ಲಿ ಇಬ್ಬರು ಯೋಧರು ತಮ್ಮ ಸೊಂಟದಲ್ಲಿ ಬಾಕು (ಕಿರು ಕತ್ತಿ) ಇಟ್ಟುಕೊಂಡು ಕೈಯಲ್ಲಿ ಕತ್ತಿ ಮತ್ತು ಗುರಾಣಿ ಹಿಡಿದಿದ್ದಾರೆ. ಇದೇ ಪಟ್ಟಿಕೆಯಲ್ಲಿ ಇಬ್ಬರು ಪ್ರಮುಖರು ಪರಸ್ಪರ ಎದುರುಬದುರಾಗಿ ಆಸನದಲ್ಲಿ ವಿರಾಜಮಾನರಾಗಿ ಅದರಲ್ಲಿ ಒಬ್ಬ ತನ್ನ ಎರಡು ಕೈಗಳಲ್ಲಿ ಹಾರವನ್ನು ಹಿಡಿದು ಮತ್ತೊಬ್ಬನಿಗೆ ನೀಡುತ್ತಿರುವಂತಿದೆ. ಮೂರನೆಯ ಪಟ್ಟಿಕೆಯಲ್ಲಿ ವ್ಯಕ್ತಿಯೊಬ್ಬನು ಸೊಂಟದಲ್ಲಿ ಬಾಕು, ಕೈಯಲ್ಲಿ ಕಂದುಕ ಮತ್ತು ಅದನ್ನು ಆಡಲು ಬಳಸುತ್ತಿದ್ದ ಕೋಲನ್ನು ಹಿಡಿದು ನಿಂತಿದ್ದಾನೆ. ಸ್ತ್ರೀ ನೀರಿನ ಕೊಡವನ್ನು ಹಿಡಿದು ದಾನ ನೀಡುತ್ತಿದ್ದು ಅದನ್ನು ಸ್ವೀಕರಿಸುವ ವ್ಯಕ್ತಿ ತನ್ನ ಕೈಯನ್ನು ನೀರಿಗಾಗಿ ಮುಂದೆ ಒಡ್ಡಿದ್ದು ಅವನ ಹಿಂಬದಿಯಲ್ಲಿ ಒಬ್ಬ ವ್ಯಕ್ತಿ ನಿಂತಿದ್ದಾನೆ. ಶಾಸನದ ಹಿಂಬದಿಯ ಮೇಲ್ಬಾಗದಲ್ಲಿ ಮೂರು ಹೆಡೆಯ ಹಾವು, ಸೂರ್ಯ, ಚಂದ್ರ ಮತ್ತು ಎಡಕ್ಕೆ ಮುಖ ಮಾಡಿರುವ ಎರಡು ಮೀನುಗಳಿವೆ. ಕೆಳಭಾಗದಲ್ಲಿ ದಾನ ನೀಡುತ್ತಿರುವ ಸ್ತ್ರೀ ನೀರಿನ ಕೊಡವನ್ನು ಹಿಡಿದುಕೊಂಡಿದ್ದು ದಾನವನ್ನು ಸ್ವೀಕರಿಸುವ ವ್ಯಕ್ತಿ ಒಂದು ಕೈಯನ್ನು ಮುಂದೆ ಮಾಡಿ ನೀರನ್ನು ಸ್ವೀಕರಿಸುತ್ತ ಇನ್ನೊಂದು ಕೈಯಲ್ಲಿ ಹಸುವಿಗೆ ಕಟ್ಟಿದ ಹಗ್ಗವನ್ನು ಹಿಡಿದು ಕೊಂಡಿದ್ದಾನೆ. ಇಲ್ಲಿ ಗಮನಿಸ ಬೇಕಾದ ಇನ್ನೊಂದು ಪ್ರಮುಖ ಅಂಶ ಏನೆಂದರೆ ದಾನ ನೀಡುವರು ಮತ್ತು ಪಡೆಯುತ್ತಿರುವವರು ನಿಂತಿರುವ ಪೀಠದಲ್ಲಿ ಕೂಡಾ ಮೂರು ಹೆಡೆಯ ಹಾವು ಕಂಡುಬರುತ್ತದೆ. ಎಡಬದಿಯಲ್ಲಿ ಇರುವ ಮೂರು ಸಾಲಿನ ಶಾಸನದ ಕೆಳಭಾಗದಲ್ಲಿ ವ್ಯಕ್ತಿಯೊಬ್ಬನನ್ನು ಚಿತ್ರಿಸಲಾಗಿದೆ.
ನಾಗರಹಳ್ಳಿಯಲ್ಲಿ ನಿರ್ಮಾಣ ಮಾಡಿರುವ ದೇವಾಲಯದಲ್ಲಿ ಐದು ಹೆಡೆಯ ಮನುಷ್ಯಾಕಾರದ ತಲೆ ಮತ್ತು ಕೈಗಳಲ್ಲಿ ಹಾರ ಹಿಡಿದಿರುವ ಮತ್ತು ಬಾಲವನ್ನು ಹೊಂದಿರುವ ಶಿಲ್ಪವಿದೆ. ಪ್ರಭಾವಳಿಯ ಬುಡದಲ್ಲಿ ಎರಡು ಮನುಷ್ಯ ದೇಹವುಳ್ಳ ಹಾವಿನ ಶಿಲ್ಪಗಳಿದ್ದು ಪ್ರಭಾವಳಿಯ ಉದ್ದಕ್ಕೂ ಅನೇಕ ಹಾವಿನ ಮರಿಗಳಿವೆ. ಡಾ ಜಗದೀಶ್ ಅವರ ಅಭಿಪ್ರಾಯದಲ್ಲಿ ರಾಷ್ಟ್ರಕೂಟ ಸಾಮ್ರಾಜ್ಯವನ್ನು 64 ವರ್ಷಗಳ ಕಾಲ ಸುದೀರ್ಘವಾಗಿ ಆಳ್ವಿಕೆ ಮಾಡಿದ ಅಮೋಘವರ್ಷನ (814 – 878 CE) ಕಾಲದಲ್ಲಿ ನಾಗರಹಳ್ಳಿಯ ಶಾಸನವನ್ನು ಹೊರಡಿಸಲಾಗಿದೆ.
ಸಾಂತರ ಬಿರುದಾವಳಿಗಳಲ್ಲಿ ಬರುವ ಮೃಗಧ್ವಜ ಉತ್ತರಮಧುರಾಧೀಶ್ವರ ಉಲ್ಲೇಖ ಈ ಶಾಸನದಲ್ಲಿ ಬಂದಿದೆ. ಹುಂಚದಲ್ಲಿನ ಕ್ರಿ.ಶ. 1077ರ ಶಾಸನದಲ್ಲಿ ನೀಡಿರುವ ವಿವರದಂತೆ ಬೀರ ಶಾನ್ತರ ಹಾಗೂ ಬೀರಲ ಮಹಾದೇವಿಗೆ ತೈಲ, ಗೊಗ್ಗಿ, ಒಡ್ಡುಗ ಮತ್ತು ಬಮ್ಮ ಎಂಬ ನಾಲ್ಕು ಮಕ್ಕಳಿದ್ದರು. ನಾಗರಹಳ್ಳಿಯ ಕ್ರಿ.ಶ. 937ರ ಶಾಸನದಲ್ಲಿ ಉಲ್ಲೇಖವಾಗಿರುವ ಒಡ್ಡುಗ ಅಮ್ಮಣದೇವ ನಂತರ ಬರುತ್ತಾನೆ. ಡಾ ಜಗದೀಶ್ ಅವರ ಅಭಿಪ್ರಾಯದಲ್ಲಿ ಈ ಶಾಸನದ ತರುವಾಯ ಪಂಚಬಸದಿಯ ಕ್ರಿ.ಶ. 1077ರ ಶಾಸನದಲ್ಲಿ ಉಲ್ಲೇಖವಾಗಿರುವ ಒಡ್ಡುಗನನ್ನು ಎರಡನೆಯ ಒಡ್ಡುಗ ಸಾಂತರ ಮತ್ತು ನಾಗರಹಳ್ಳಿಯ ಶಾಸನದಲ್ಲಿ ಉಲ್ಲೇಖವಾಗಿರುವ ಒಡ್ಡುಗನನ್ನು (ಒಡ್ಡಿಗ) ಒಂದನೆಯ ಒಡ್ಡಿಗ ಎಂದು ಕರೆಯಬಹುದು. Saakshatv Naavu kelada charitre episode14
ಶಾಸನದಲ್ಲಿ ಇರುವ ಹಾವಿನ ಚಿತ್ರ, ಶಾಸನದಲ್ಲಿ ಉಲ್ಲೇಖವಾಗಿರುವ ನಾಗರ ಕೆರೆ, ದೇವಾಲಯದಲ್ಲಿರುವ ಶಿಲ್ಪ ಹಾಗೂ ಹರಕೆ ಹೊತ್ತಿರುವವರು ನಿಲ್ಲಿಸಿರುವ ಸಹಸ್ರಾರು ನಾಗರ ಕಲ್ಲುಗಳು ಈ ಸ್ಥಳದ ಮಹತ್ವವನ್ನು ಸೂಚಿಸುತ್ತದೆ. ಈ ಶಿಲಾಶಾಸನ ದೊರೆತ ಸ್ಥಳದಿಂದ ಸ್ವಲ್ಪ ದೂರದಲ್ಲಿ ಇರುವ ಕಡಸೂರಿನ (ಗಣಪತಿ ದೇವಾಲಯದಲ್ಲಿ ಬಳಿ ನೆಟ್ಟಿರುವ ಕಲ್ಲು) ವಿಜಯನಗರ ಕಾಲದ ಶಾಸನದಲ್ಲಿ ನಾಗರಹಳ್ಳಿಯ ಉಲ್ಲೇಖ ಇರುವುದು ಗಮನಾರ್ಹ ಸಂಗತಿ. ಈ ಶಿಲಾಶಾಸನದಲ್ಲಿ ಕೆತ್ತಿರುವ ಚಿತ್ರಗಳಲ್ಲಿ ಅಂದಿನ ಕಾಲದದಲ್ಲಿ ನೀರಿನಿಂದ ದಾನವನ್ನು ನೀಡುವ ಬಗ್ಗೆ, ಯಾವುದೇ ವಸ್ತುವಿನ ಮೇಲೆ ಹಕ್ಕು ವಿಲೇವಾರಿ ಮಾಡುವ ವಿಧಾನ ಮತ್ತು ಅದರಲ್ಲೂ ಪ್ರಮುಖವಾಗಿ ಸ್ತ್ರೀಗೆ ಅಂದಿನ ಕಾಲದಲ್ಲಿ ನೀಡುತ್ತಿದ್ದ ಪ್ರಾಮುಖ್ಯತೆಯನ್ನು ಗಮನಿಸಬಹುದು.
ಮಲೆನಾಡು ಮತ್ತು ಕರಾವಳಿಯನ್ನು ಹೊಂಬುಜದಿಂದ (ಹುಂಚ) ಆಳಿದ ಸಾಂತರರು ಗಂಗರು, ರಾಷ್ಟ್ರಕೂಟರು, ಚಾಳುಕ್ಯರು, ಹೊಯ್ಸಳರು ಮತ್ತು ವಿಜಯನಗರದ ಅರಸರ ಮಾಂಡಳಿಕರಾಗಿ ರಾಜ್ಯವನ್ನು ಆಳುತ್ತಿದ್ದರು. ಕಾಲಾಂತರದಲ್ಲಿ ಸಾಂತರು ಹೊಸನಗರ ತಾಲೂಕಿನ ಶರಾವತಿ ನದಿಯ ದಂಡೆಯ ಮೇಲೆ ಇರುವ ಸೇತು ಎಂಬಲ್ಲಿ ನೆಲೆಸಿ ತದನಂತರ ತಮ್ಮ ರಾಜಧಾನಿಯನ್ನು ಸಿಸಿಲ (ಶಿಶಿಲ) ಮತ್ತು ನಂತರದಲ್ಲಿ ಕಾರ್ಕಳಕ್ಕೆ ಬದಲಾಯಿಸುತ್ತಾರೆ. ಸೇತು ಇಂದಿನ ಹೊಸನಗರ ತಾಲೂಕಿನ ಕರೂರು ಮತ್ತು ಪಟ್ಟಗುಪ್ಪೆ ಊರುಗಳ ಮಧ್ಯದಲ್ಲಿ ಇದ್ದು ಇಂದು ಲಿಂಗನಮಕ್ಕಿ ಆಣೆಕಟ್ಟಿನ ಹಿನ್ನೀರಿನಲ್ಲಿ ಮುಳುಗಿ ಹೋಗಿದೆ. ವಿಜಯನಗರ ಸಾಮ್ರಾಜ್ಯದ ಪತನದ ನಂತರ ಸಾಂತಳಿಗೆ ಸಾವಿರ ರಾಜ್ಯವು ಕೆಳದಿ ಅರಸರ ಆಳ್ವಿಕೆಗೆ ಒಳಪಟ್ಟಿತ್ತು. ಕೆಲವು ಇತಿಹಾಸಕಾರರು ಸಾಂತರು ಇಬ್ಬಾಗವಾಗಿ ಒಂದು ಶಾಖೆ ಕಳಸೆ (ಕಳಸ) ಮತ್ತು ಇನ್ನೊಂದು ಸಾಗರ ತಾಲೂಕಿನ ಹೊಸಗುಂದದಲ್ಲಿ ನೆಲೆಸಿದರು ಎಂದು ಅಭಿಪ್ರಾಯ ಪಡುತ್ತಾರೆ. ಈ ಶಾಸನದಲ್ಲಿ ಬರುವ ವಿವರ ಈ ಕೆಳಗಿನಂತೆ ಇರುತ್ತದೆ.
ಮುಂಭಾಗದ ಮೊದಲ ಹಾಗು ಎರಡನೆಯ ಪಟ್ಟಿಕೆಯ ಮಧ್ಯೆ ದಾಯ .. ದೇವಾ ಒಡ್ಡಿಗಂ ಪರಚಕ್ರಗಣ್ದ, ಮೂರನೆಯ ಪಟ್ಟಿಕೆಯ ಕೆಳಗೆ
೧. ದೊನ್ನಯ್ಯಂ
೨. ದೇವಿಯರು
೩. ಸ್ವಸ್ತಿ ಸಖನೃಪಕಾಲಾತೀಥ ಸಂವತ್ಸರಗಳೆಟು
೪. ನೂಱ ಅರುವತ್ತನೆ ಹೆಮಳಂಬಿ ಎಂಬ ಸಂವ
೫. ತ್ಸರ ಪ್ರವರ್ತಿಸೆ ಅಮೋಘವರ್ಷಂ ಪೃಥುವೀರಾಜ್ಯ
೬. ಗೆಯ್ಯುತ್ತಿರೆ ಸ್ವಸ್ತನುಪಮ ಪರಶಂನ
೭. ಮಹೋಗ್ರ ಕುಳಾತಿಲಕ ಮೃಗೇನ್ದ್ರಲಾ
೮. ಛನ ತುಲಾ ಮೃಗಧ್ವಜನುತ್ತರ ಮ
೯. ಧುರಾದಿನಾಥ ಪರಚಕ್ರ . ಮನ
೧೦. ಭ
ಎಡಭಾಗದಲ್ಲಿ
೧. ಪ್ರಸಿದ್ದವ ೧೩. ಗಣ ಸರಿಕೋ
೨. ಳ್ವದಯ ಮಣ್ಣು ೧೫. ಱೆಯ ಕೆಱಗ
೩. ಆವಾವುದಾ ೧೬. ಣ ಮಣ್ಣಂ ಭಗವ
೪. .. ಟಳ್ವಯ ೧೭. ತಿಗೆ ಒಡ್ಡಿಗ
೫. ಲುಂ ದಾಗಿಱೆಯು ೧೮. ನ ಕೆಱೆ ಒಳಗಾ
೬. ಆದಿಯ ದಾಗಿ ೧೯. ಗಿ ಬಡಗಣ ಪಾ
೭. ಱೆಯು ಇಱು ೨೦. ಲಿನ ಬಯ್ಸಗು
೮. ದೇಗೋದು ಬಾ ೨೧. ನ್ದಂಗೆ ದೇವಿಯರು
೯. ಳಿಂಗೆ ಗೇರೆಯ ೨೨. ಒಡ್ಡುಗನು ಕಾಲ ಕ
೧೦. ಬಯಲು ಕಾ ೨೩. ಱ್ಚೆ ಕೊಟ್ಟ ರಾಮಗೌಡ
೧೧. ನಬಯಲು ಸು ೨೪. ಸನ್ದಿವಿಗ್ರಹನ .
೧೨. ಳ್ಳಿಯ ಕಾರ ಮೇ ೨೫. ……
ಹಿಂಭಾಗದಲ್ಲಿ
೧. ಬಯ್ಸಗುನ್ದರ ನಾಗಯ್ಯಗೆ
೨.ಆದಾಯ ಗೊಳೂಟತ್ತ
೩. ಯ್ಯಂ ರೆಲೆಱೆ ಯಿ ದೇವಿ
೪. ಯ ಕಾಲಂಕಱ್ಚೆ ತಮ್ಮ
೫. ಬ್ರಹ್ಮದೇಯ ಮೊನ್ದು ಕೊ
೬. ಟ್ಟರು ಈ ಧರ್ಮ್ಮಮ ಕಾದು
೭. . ಯು . ತ್ಯಂಬರ
೮. ಕವಿಲೈ . ದೇವಿಯರ ಮಾ
೯. ತು ಧರ್ಮ್ಮಮಂ ನಿಱೆಸಿನಂ
೧೦. … ಪೊಂಬುಳ್ಚ
೧೧. ತ್ತುಂ ನಾಱ್ಸೆನ್ಸರು ಇದ
೧೨. ನಱೆದೋ ಕವಿಲೆಯ
೧೩. ಕೆರೆಯು ಮಾ ..
೧೪. ನಱೆದೋ
ಬಲಭಾಗದಲ್ಲಿ
೧. ಮ … ಮೋ
೨. ಗ ತುಲಾ
ನಮ್ಮ ಮಲೆನಾಡಿನ ಪರಿಸರದಲ್ಲಿ ಸಿಗುವ ಅಸಂಖ್ಯಾತ ಶಿಲಾಶಾಸನಗಳಲ್ಲಿ ನಾಗರಹಳ್ಳಿ ಚತುರ್ಮುಖ ಶಾಸನ ನಿಜಕ್ಕೂ ವಿಶೇಷ ಹಾಗೂ ವಿನೂತನವಾಗಿದೆ. ಆದರೆ ನಮ್ಮ ದುರಾದೃಷ್ಟವಶಾತ್ ಇಲ್ಲಿನ ಕೆಲವು ಸ್ಥಳೀಯರು ಇದರ ಬಗ್ಗೆ ಜ್ಞಾನ ಇಲ್ಲದೆ ಈ ಪುರಾತನ ಶಾಸನವನ್ನು ಕೆಳದಿ ಪ್ರಭು ಸೋಮಶೇಖರನ ಕಾಲದ್ದು ಎಂದು ಹೇಳಿ ಇತಿಹಾಸವನ್ನು ತಿರುಚುವ ಕೆಲಸಕ್ಕೆ ಮುಂದಾಗಿದ್ದಾರೆ. ಇನ್ನಾದರು ನಾಗರಹಳ್ಳಿಯ ದೇವಾಲಯದವರು ಈ ಶಾಸನಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನು ಸ್ಥಳದಲ್ಲಿ ಪ್ರದರ್ಶಿಸುವ ವ್ಯವಸ್ಥೆ ಮಾಡುವ ಮೂಲಕ ಜನರು ಮತ್ತು ವಿಶೇಷವಾಗಿ ಭಕ್ತರಿಗೆ ಮಾಹಿತಿಯನ್ನು ನೀಡಬೇಕು.
ಲೇಖನ ಮತ್ತು ಚಿತ್ರಗಳು :-
ಅಜಯ್ ಕುಮಾರ್ ಶರ್ಮಾ
ಇತಿಹಾಸ ಅಧ್ಯಯನಕಾರರು ಮತ್ತು ಪರಿಸರ ಹೋರಾಟಗಾರ
ಶಿವಮೊಗ್ಗ
ಸಾಕ್ಷಾಟಿವಿಯ ‘ನಾವು ಕೇಳದ ಚರಿತ್ರೆ’ ಅಂಕಣಕಾರ ಅಜಯ್ ಕುಮಾರ್ ಶರ್ಮಾ ಅವರ ಕಿರು ಪರಿಚಯ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel