ಹಾಲಿನಲ್ಲಿ ಉಪ್ಪಿನಾಂಶದ ರಾಸಾಯನಿಕ ಕಲಬೆರಿಕೆ Saaksha Tv
ಮಂಡ್ಯ: ಹಾಲಿನಲ್ಲಿ ನೀರಿನ ಜೊತೆಗೆ ರಾಸಾಯನಿಕ ಮಿಶ್ರಣವಾಗುತ್ತಿದ್ದ ಪ್ರಕರಣವು, ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಹೊನ್ನಲಗೆರೆ ಡೈರಿಯಿಂದ ಪೂರೈಕೆಯಾಗುತ್ತಿದ್ದ ಹಾಲಿನ್ನು ಪರೀಕ್ಷಿಸಿದಾಗ ಬೆಳಕಿಗೆ ಬಂದಿದೆ.
ಕಳೆದ ವರ್ಷವಷ್ಟೇ ಮಂಡ್ಯ ಜಿಲ್ಲಾ ಹಾಲು ಒಕ್ಕೂಟದಲ್ಲಿ ಹಾಲಿನಲ್ಲಿ ನೀರು ಬೆರಸಲಾಗುತ್ತಿದೆ ಎಂದು ಆರೋಪ ಕೇಳಿ ಬಂದಿತ್ತು. ಈ ಕುರಿತು ಸಿಐಡಿ ತನಿಕೆ ನಡೆಸುತ್ತಿರುವಾಗಲೇ ಈ ಕಲಬೆರೆಕೆ ಹಗರಣ ಬೆಳಕಿಗೆ ಬಂದಿದೆ. ಹಾಲಿನಲ್ಲಿ ನೀರು ಹಾಕಿದಾಗ ಹಾಲನ್ನು ಪರೀಕ್ಷಿಸಿದರೆ ಕೊಬ್ಬಿನಾಂಶ ಕಡಿಮೆ ತೋರಿಸುತ್ತದೆ. ಹಾಗಾಗಿ ಹಾಲನ್ನು ಪರೀಕ್ಷಿಸಿದಾಗ ಗುಣಮಟ್ಟ ಹೆಚ್ಚು ತೋರಿಸಲೆಂದು ಉಪ್ಪಿನಾಂಶದ ರಾಸಾಯನಿಕ ಬೆರಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಪ್ರತಿನಿತ್ಯ 35 ಕ್ಯಾನ್ ಹಾಲು ಸರಬರಾಜು ಮಾಡುತ್ತಿದ್ದ ಕೆ.ಹೊನ್ನಲಗೆರೆ ಡೈರಿಯ ಹಾಲಿನಲ್ಲಿ ರಾಸಾಯನಿಕ ಮಿಶ್ರಣವಾಗುತ್ತಿದ್ದರಿಂದ, ಡೈರಿಗೆ ಹಾಲು ಶೇಖರಣೆಯನ್ನು ಸ್ಥಗಿತಗೊಳಿಸುವಂತೆ ಮನ್ಮುಲ್ ಆಡಳಿತ ಮಂಡಳಿ ನೋಟಿಸ್ ನೀಡಿದೆ. ಇದು ನಂದಿನಿ ಹಾಲಿನ ಮೇಲೆ ಅನುಮಾನ ಮೂಡುವಂತೆ ಮಾಡಿದ್ದು ಜನರಲ್ಲಿ ಆತಂಕ ಹೆಚ್ಚಿಸಿದೆ.