NEET 2022 – ನೀಟ್ ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಯುವತಿ ಆತ್ಮಹತ್ಯೆ…
ನಿನ್ನೆ ಬಿಡುಗಡೆಯಾದ NEET ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ 19 ವರ್ಷದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿನಿ ತಿರುಮುಲ್ಲೈವಾಯಲ್ ಬಳಿಯ ಇಂದಿರಾ ನಗರದ ನಿವಾಸಿಯಾಗಿದ್ದು, ಈ ವರ್ಷ ನೀಟ್ ಬರೆದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿ ಪರೀಕ್ಷೆಯಲ್ಲಿ ಅನುತ್ತೀರ್ಣಳಾಗಿದ್ದು, ಬುಧವಾರ ಫಲಿತಾಂಶ ಪ್ರಕಟವಾಗಿದೆ. ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕಿಲ್ಪಾಕ್ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕಳುಹಿಸಲಾಗಿದೆ. ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಈ ಮಧ್ಯೆ ತಮಿಳುನಾಡಿನಿಂದ ನೀಟ್ ಬರೆದ ವಿದ್ಯಾರ್ಥಿಗಳ ಪಟ್ಟಿಯನ್ನ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯಿಂದ ರಾಜ್ಯ ಸರ್ಕಾರವು ಸ್ವೀಕರಿಸಿದೆ ಎಂದು ಆರೋಗ್ಯ ಸಚಿವ ಮಾ ಸುಬ್ರಮಣಿಯನ್ ಬುಧವಾರ ಸುದ್ದಿಗಾರರಿಗೆ ತಿಳಿಸಿದರು. ರಾಜ್ಯದಿಂದ ಒಟ್ಟು 1,45,988 ಮಂದಿ ನೀಟ್ ಬರೆದಿದ್ದಾರೆ ಎಂದು ಸುಬ್ರಮಣಿಯನ್ ಹೇಳಿದ್ದಾರೆ.
ವಿದ್ಯಾರ್ಥಿಗಳಿಗೆ ಸಮಾಲೋಚನೆ ನೀಡಲು 110 ಮನೋವೈದ್ಯರನ್ನು ನಿಯೋಜಿಸಲಾಗಿದೆ ಎಂದು ಆರೋಗ್ಯ ಸಚಿವರು ಹೇಳಿದರು. “ಒಟ್ಟು 554 ವಿದ್ಯಾರ್ಥಿಗಳು ತೀವ್ರ ಒತ್ತಡಕ್ಕೆ ಒಳಗಾಗಿರುವುದು ಕಂಡುಬಂದಿದೆ. ಅವರಿಗೆ ಸಮಾಲೋಚನೆ ನೀಡಲಾಗಿದೆ,” ಎಂದು ಸುಬ್ರಮಣಿಯನ್ ಹೇಳಿದರು.
”ಜಿಲ್ಲಾ ಮಾನಸಿಕ ಆರೋಗ್ಯ ಸಲಹಾ ಸಮಿತಿಯು ಪ್ರಸ್ತುತ 98 ವಿದ್ಯಾರ್ಥಿಗಳ ಮೇಲೆ ನಿಗಾ ಇರಿಸಿದೆ. ನೀಟ್ ತೇರ್ಗಡೆಯಾಗಲು ವಿಫಲರಾದವರಿಗೆ ವೃತ್ತಿ ಮಾರ್ಗದರ್ಶನವನ್ನೂ ನೀಡಲಾಗುತ್ತದೆ,” ಎಂದು ಅವರು ಹೇಳಿದರು.