ಯುಎಇನಲ್ಲಿ ಸಿಎಸ್‍ಕೆ ತಂಡಕ್ಕೆ ಕಾಡುತ್ತಿರುವ ಕೊವಿಡ್ -19 ಸೋಂಕು..!
ಕೋವಿಡ್-19 ಸೋಂಕಿನ ನಡುವೆಯೂ ತರಬೇತಿ ಶಿಬಿರವನ್ನು ನಡೆಸಿ ಯುಎಇಗೆ ಪ್ರಯಾಣ ಬೆಳೆಸಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈಗ ಆಘಾತದಲ್ಲಿದೆ. ಸಿಎಸ್‍ಕೆ ತಂಡ ಓರ್ವ ವೇಗಿ ಹಾಗೂ 12 ಮಂದಿ ಸಿಬ್ಬಂದಿಗಳಿಗೆ ಕೋವಿಡ್-19 ಪಾಸಿಟಿವ್ ದೃಢವಾಗಿದೆ ಎಂದು ವರದಿಯಾಗಿದೆ.
ಆಗಸ್ಟ್ 21ರಂದು ಯುಎಇಗೆ ಪ್ರಯಾಣ ಬೆಳೆಸಿರುವ ಸಿಎಸ್‍ಕೆ ತಂಡ ಆರು ದಿನಗಳ ಕಾಲ ಕ್ವಾರಂಟೈನ್ ನಲ್ಲಿರಬೇಕಾಗಿತ್ತು. ಆನಂತರವೇ ತಂಡದ ಆಟಗಾರರು ಅಭ್ಯಾಸ ನಡೆಸಬೇಕಾಗಿತ್ತು. ಆದ್ರೆ ಈಗ ತಂಡದ ತರಬೇತಿ ಶಿಬಿರವನ್ನು ಮುಂದೂಡಲಾಗಿದೆ. ಹಾಗೇ ಕ್ವಾರಂಟೈನ್ ಸಮಯವನ್ನು ಸಹ ಮುಂದೂಡಲಾಗಿದೆ. ಹಾಗೇ ಕೋವಿಡ್ ಸೊಂಕು ಪತ್ತೆಯಾದ ಸಿಬ್ಬಂದಿಗಳು ಮತ್ತು ಓರ್ವ ವೇಗಿ ಐಸೋಲೇಸನಲ್ಲಿದ್ದಾರೆ.
ಈಗಾಗಲೇ ಕೆಲವು ತಂಡಗಳು ಅಭ್ಯಾಸದಲ್ಲಿ ನಿರತವಾಗಿವೆ. ಅದೇ ರೀತಿ ಕ್ವಾರಂಟೈನ್ ನಲ್ಲಿರುವ ಸಿಎಸ್‍ಕೆ ಆಟಗಾರರು ಫಿಟ್‍ನೆಸ್ ಸೇರಿದಂತೆ ವೈಯಕ್ತಿಕ ಅಭ್ಯಾಸದಲ್ಲಿ ನಿರತರಾಗಿದ್ದಾರೆ.
ಭಾರತದಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಬಿಸಿಸಿಐ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಯುಎಇ ನಲ್ಲಿ ಆಯೋಜನೆ ಮಾಡುತ್ತಿದೆ. ಸೆಪ್ಟಂಬರ್ 19ರಿಂದ ನವೆಂಬರ್ 10ರವರೆಗೆ ಐಪಿಎಲ್ ಟೂರ್ನಿ ನಡೆಯಲಿದೆ.
ಈ ಟೂರ್ನಿಯು ಪ್ರೇಕ್ಷಕರಿಲ್ಲದೆ ನಡೆಯುತ್ತಿದೆ. ಆಟಗಾರರು ಕೋವಿಡ್ ಮಾರ್ಗಸೂಚಿ ಮತ್ತು ಶಿಷ್ಟಚಾರಗಳ ಜೊತೆಗೆ ಜೈವಿಕ ಸುರಕ್ಷತೆಯಲ್ಲಿ ಆಡಲಿದ್ದಾರೆ.








