ಆ ತಂಡದ ಭಾಗವಾಗಿದ್ದರೆ ಚೆನ್ನಾಗಿರುತ್ತಿತ್ತು : ಪೂಜಾರ
ಮುಂಬೈ: 2016 ರಲ್ಲಿ ತಮ್ಮದೇ ರಾಜ್ಯದ ಗುಜರಾತ್ ಲಯನ್ಸ್ ತಂಡ ತಮ್ಮನ್ನ ಖರೀಸಿದೇ ಇದ್ದದ್ದು ತುಂಬಾ ಬೇಸರವನ್ನುಂಟು ಮಾಡಿತ್ತು ಎಂದು ಭಾರತ ಟೆಸ್ಟ್ ತಂಡದ ಖಾಯಂ ಸದಸ್ಯನಾಗಿರುವ ಚೇತೇಶ್ವರ್ ಪೂಜಾರ ಹೇಳಿಕೊಂಡಿದ್ದಾರೆ.
ಬರೋಬ್ಬರಿ ಏಳು ವರ್ಷಗಳ ನಂತರ ಪೂಜಾರ ಅವರನ್ನ ಚೆನ್ನೈ ತಂಡ ಖರೀದಿ ಮಾಡಿದೆ. ಈ ಹಿಂದೆ 2014ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ಕೊನೆಯ ಬಾರಿ ಐಪಿಎಲ್ ನಲ್ಲಿ ಕಾಣಿಸಿಕೊಂಡಿದ್ದ ಪೂಜಾರ ಅವರನ್ನು 50 ಲಕ್ಷ ರೂ ಮೂಲಬೆಲೆಗೆ ಸಿಎಸ್ ಕೆ ಖರೀದಿಸಿದೆ.
ಈ ವಿಚಾರವಾಗಿ ಕ್ರೀಡಾ ವೆಬ್ ಸೈಟ್ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಪೂಜಾರ, 2016ರಲ್ಲಿ ಗುಜರಾತ್ ಲಯನ್ಸ್ ನನ್ನನ್ನು ಆಯ್ಕೆ ಮಾಡದಿರುವುದಕ್ಕೆ ತುಂಬಾ ನಿರಾಶೆಯಾಗಿತ್ತು. ಆದರೆ ಅದು ನನ್ನ ನಿಯಂತ್ರಣದಲ್ಲಿರಲಿಲ್ಲ. ಆದರೆ ಖಂಡಿತ ಆ ತಂಡದ ಭಾಗವಾಗಿದ್ದರೆ ಚೆನ್ನಾಗಿರುತ್ತಿತ್ತು. ಅದೆಲ್ಲಾ ಈಗ ಮುಗಿದ ಕಥೆ. ನಾನು ಅದರಿಂದ ಮುಂದುವರೆದಿದ್ದೇನೆ ಎಂದು ತಿಳಿಸಿದ್ದಾರೆ.
ಅಲ್ಲದೆ ಚೆನ್ನೈ ತಂಡ ಸೇರ್ಪಡೆಗೊಂಡಿರುವುದಕ್ಕೆ ಪೂಜಾರ ಸಂತಸ ವ್ಯಕ್ತಪಡಿಸಿದ್ದು, ಫ್ರಾಂಚೈಸಿ ನನ್ನ ಮೇಲೆ ನಂಬಿಕೆ ತೋರಿದ್ದಕ್ಕೆ ನಾನು ಋಣಿ ಎಂದು ಹೇಳಿದ್ದಾರೆ.