ಚಿಕ್ಕಬಳ್ಳಾಪುರದಲ್ಲಿ ಘೋರ ದುರಂತ : ಸುಧಾಕರ್ ವಿರುದ್ಧ ಆರೋಪಗಳ ಸುರಿಮಳೆ
ಚಿಕ್ಕಬಳ್ಳಾಪುರ : ಶಿವಮೊಗ್ಗದ ಹುಣಸೋಡು ಗ್ರಾಮದಲ್ಲಿ ಜಿಲೆಟಿನ್ ಸ್ಫೋಟದ ಮಾದರಿಯಲ್ಲೇ ಚಿಕ್ಕಬಳ್ಳಾಪುರದ ಗುಡಿಬಂಡೆ ತಾಲೂಕಿನ ಹಿರೇನಾಗವಲ್ಲಿಯಲ್ಲಿ ಜಿಲೆಟಿನ್ ಕಡ್ಡಿ ಸ್ಫೋಟಿಸಿ ಆರು ಮಂದಿ ಮೃತಪಟ್ಟಿದ್ದಾರೆ. ಈ ಘಟನೆ ಸಂಬಂಧ ಸಚಿವ ಡಾ ಕೆ ಸುಧಾಕರ್ ವಿರುದ್ಧ ಸ್ಥಳೀಯರೊಬ್ಬರು ಆರೋಪಗಳ ಸುರಿಮಳೆ ಗೈದಿದ್ದಾರೆ.
ಘಟನೆಯಲ್ಲಿ ಮೃತಪಟ್ಟವರನ್ನು ಕ್ರಷರ್ ನ ಎಂಜಿನಿಯರ್ ಉಮಾಕಾಂತ್, ಭದ್ರತಾ ಸಿಬ್ಬಂದಿ ಮಹೇಶ್, ಬಿಲ್ಲಿಂಗ್ ನೌಕರ ಮುರಳಿ, ಸ್ಥಳೀಯ ನಿವಾಸಿ ರಾಮು, ಅಭಿ ಹಾಗೂ ಕಂಪ್ಯೂಟರ್ ಆಪರೇಟರ್ ಗಂಗಾಧರ್ ಎಂದು ಗುರುತಿಸಲಾಗಿದೆ. ಟಾಟಾ ಏಸ್ ಚಾಲಕ ರಿಯಾಜ್ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ರವಾನಿಸಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಮತ್ತು ಜಿಲ್ಲಾಧಿಕಾರಿ ಆರ್ ಲತಾ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ಸಚಿವ ಸುಧಾಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಮುಂದಿನ ಕ್ರಮಕ್ಕೆ ಸೂಚನೆ ನೀಡಿದ್ದಾರೆ. ಅಲ್ಲದೆ ಕ್ರಷರ್ ಮಾಲೀಕರನ್ನು ಬಂಧಿಸುವಂತೆ ಆದೇಶ ನೀಡಿದ್ದಾರೆ.
ಸಚಿವರ ವಿರುದ್ಧ ಆರೋಪಗಳ ಸುರಿಮಳೆ
ಇನ್ನು ಸ್ಫೋಟ ನಡೆದ ಸ್ಥಳಕ್ಕೆ ಸುಧಾಕರ್ ಭೇಟಿ ನೀಡುತ್ತಿದ್ದಂತೆ ಸ್ಥಳೀಯ ನಿವಾಸಿ ಆರೋಪಗಳ ಸುರಿಮಳೆಗೈದು ಆಕ್ರೋಶ ಹೊರ ಹಾಕಿದರು. ಸಚಿವ ಸುಧಾಕರ್ ಮತ್ತು ಅವರ ಸಂಬಂಧಿಕರ ಒಡೆತನದ ಸರ್ವೇ ನಂಬರ್ 11ರಲ್ಲಿ 30 ಎಕರೆ ಜಮೀನು ಹೊಂದಿದ್ದು, ಅವರೇ ಗಣಿಗಾರಿಕೆಗೆ ಮುಂದಾಗಿದ್ದಾರೆ. ಹಾಗಾಗಿ ಈ ಸ್ಫೋಟಕ್ಕೆ ಸುಧಾಕರ್ ಅವರೇ ನೇರ ಹೊಣೆ ಎಂದು ಆರೋಪಿಸಿದರು.
