ಬೆಂಗಳೂರು: ಮಲ್ಲೇಶ್ವರಂ (Malleshwaram) ಬಿಬಿಎಂಪಿ ಮೈದಾನದ ಗೇಟ್ ಬಿದ್ದ ಪರಿಣಾಮ ಮಗು ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ 10 ಲಕ್ಷ ರೂ. ಪರಿಹಾರ ನೀಡಲಾಗಿದ್ದು, ತನಿಖೆಗೆ ಆದೇಶಿಸಲಾಗಿದೆ.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundurao) ಅವರು, ಗುತ್ತಿಗೆದಾರರು ಹಾಗೂ ಅಧಿಕಾರಿಗಳ ಮೇಲೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಭಾನುವಾರ ಮಲ್ಲೇಶ್ವರಂ ಬಿಬಿಎಂಪಿ ಆಟದ ಮೈದಾನದಲ್ಲಿ ಗೇಟ್ ಬಿದ್ದು 11 ವರ್ಷದ ಬಾಲಕ ನಿರಂಜನ್ ಸಾವನ್ನಪ್ಪಿದ್ದ. ಹೀಗಾಗಿ ತನಿಖೆ ನಡೆಸಲು ಬಿಬಿಎಂಪಿ ಕಮಿಷನರ್ಗೆ ಸೂಚಿಸಲಾಗಿದೆ.
ಮೈದಾನಕ್ಕೆ 4 ವರ್ಷದ ಹಿಂದೆ ಗೇಟ್ ಅಳವಡಿಸಲಾಗಿದೆ. ಕಳಪೆ ಮಾಡಿದ್ದಾರೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ. ಈ ಕುರಿತು ಯಾರಿಂದಲೂ ದೂರು ಬಂದಿರಲಿಲ್ಲ. ಕಾರ್ಯಕರ್ತರ ಗಮನಕ್ಕೂ ಬಂದಿಲ್ಲ. ಯಾರಿಂದ ಲೋಪ ಆಗಿದೆ ಎಂಬ ಬಗ್ಗೆ ಪರಿಶೀಲಿಸುತ್ತೇವೆ. ಈ ಕುರಿತು ಪ್ರಮಾಣಿಕ ತನಿಖೆ ನಡೆಸಬೇಕೆಂದು ಸೂಚಿಸಿದ್ದಾರೆ.
ಈ ಸಂದರ್ಭದಲ್ಲಿ ಸಚಿವ ದಿನೇಶ್ ಗುಂಡುರಾವ್ ಬಾಲಕನ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಕುಟುಂಬಕ್ಕೆ ಬಿಬಿಎಂಪಿಯಿಂದ 5 ಲಕ್ಷ ರೂ. ಹಾಗೂ ಗಾಂಧಿ ನಗರ ಬ್ಲಾಕ್ ಕಾಂಗ್ರೆಸ್ (Congress) ವತಿಯಿಂದ 5 ಲಕ್ಷ ರೂ. ಪರಿಹಾರ ಘೋಷಿಸಲಾಯಿತು. ಬಾಲಕನ ಸಹೋದರಿಯ ಸಂಪೂರ್ಣ ವಿದ್ಯಾಭ್ಯಾಸದ ಹೊಣೆಯನ್ನು ಆರ್.ಗುಂಡೂರಾವ್ ಫೌಂಡೇಶನ್ ವಹಿಸಿಕೊಳ್ಳಲಿದೆ ಎಂದು ಹೇಳಿದ್ದಾರೆ.