ಕಾಸರಗೋಡು : ಆಸ್ತಿಗಾಗಿ ಪಾಪಿ ಮಕ್ಕಳು ತಾಯಿಯನ್ನೇ ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಬಿಂಬಿಸಿರುವ ಘಟನೆಯೊಂದು ವರದಿಯಾಗಿದೆ.
ಕಾಸರಗೋಡಿನ 68 ವರ್ಷದ ಕೊಳತ್ತೂರು ಚೇಪನಡುಕದ ಪುಕ್ಲತ್ ಅಮ್ಮಾಳುವಮ್ಮ ಎಂಬುವವರ ಶವ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಕ್ಕಳು ಗೋಳಾಡಿದ್ದರು. ಆದರೆ, ಈ ಸಾವು ಆತ್ಮಹತ್ಯೆಯಲ್ಲ, ಕೊಲೆ ಎಂಬುವುದನ್ನು ಪೊಲೀಸರು ಬಯಲು ಮಾಡಿದ್ದಾರೆ.
ಕಾಸರಗೋಡಿನ ವೈದ್ಯಕೀಯ ಕಾಲೇಜಿನ ಫೊರೆನ್ಸಿಕ್ ಸರ್ಜನ್ ಆಗಿದ್ದ ಡಾ. ಎಸ್. ಗೋಪಾಲಕೃಷ್ಣ ಪಿಳ್ಳೆ ಅವರು ಶವ ಪರೀಕ್ಷೆಯಲ್ಲಿ ಆ ಮಹಿಳೆಯ ಕತ್ತು ಹಿಸುಕಿ ಕೊಲೆ ಮಾಡಿರುವುದು ಪತ್ತೆಯಾಗಿದೆ ಎಂದು ವರದಿ ನೀಡಿದ್ದಾರೆ. ವರದಿ ಆಧರಿಸಿ ಸದ್ಯ ಪಾಪಿ ಮಕ್ಕಳನ್ನು ಪೊಲೀಸರು ಬಂಧಿಸಿದ್ದಾರೆ.
ನೇಣು ಬಿಗಿದ ಸ್ಥಿತಿ ಗಮನಿಸಿದ ಅವರು ನೇಣು ಬಿಗಿದುಕೊಂಡ ರಾಡ್ ಆಕೆಯ ದೇಹದ ತೂಕವನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿಲ್ಲ ಎಂದು ಹೇಳಿದ್ದರು. ಮೃತದೇಹ ನೆಲದ ಮೇಲೆ ಬಿದ್ದಿದ್ದು, ತಲೆ ವಾಲಿರುವುದು ಕೂಡ ಆತ್ಮಹತ್ಯೆಯಲ್ಲ ಎಂಬ ಅನುಮಾನ ವ್ಯಕ್ತವಾಗಿತ್ತು.
ಹತ್ಯೆಗೀಡಾದ ಮಹಿಳೆ ತನ್ನ ಅಜ್ಜಿಯ ಹೆಸರಿನಲ್ಲಿದ್ದ 70 ಸೆಂಟ್ಸ್ ಜಾಗವನ್ನು ಮಾರಾಟ ಮಾಡಿ ಮತ್ತೊಂದು ಜಮೀನು ಖರೀದಿಸಿದ್ದರು. ಅದನ್ನು ಅವರ ಮಗ ಮತ್ತು ಹೆಂಡತಿಯ ಹೆಸರಿನಲ್ಲಿ ನೋಂದಾಯಿಸಲು ಒತ್ತಾಯಿಸಿದ್ದ. ಮನೆಯನ್ನು ತಮ್ಮ ಹೆಸರಿಗೆ ವರ್ಗಾಯಿಸದಿದ್ದರೆ, ಇಷ್ಟವಾದ ಆಹಾರ ನೀಡುವುದಿಲ್ಲ. ಮನೆಯಲ್ಲಿ ಟಿವಿ ನೋಡುವಂತಿಲ್ಲ ಎಂದು ತಾಕೀತು ಮಾಡಿದ್ದರು. ಈ ವಿಚಾರವಾಗಿ ಜಗಳ ನಡೆದು ಕೊಲೆ ಮಾಡಿದ್ದಾರೆ. ಮಲಗಿದ್ದ ತಾಯಿಯನ್ನು ಕೈಗಳಿಂದ ಕತ್ತು ಹಿಸುಕಿ, ಮುಖಕ್ಕೆ ದಿಂಬು ಬಿಗಿದು ಕುತ್ತಿಗೆಗೆ ನೈಲಾನ್ ಹಗ್ಗ ಸುತ್ತಿ ಉಸಿರುಗಟ್ಟಿಸಿರುವುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.