ಭಾರತದ ವೆಬ್ ಸೈಟ್ ಗಳನ್ನು ಬ್ಲಾಕ್ ಮಾಡಿದ ಚೀನಾ
ಬೀಜಿಂಗ್, ಜುಲೈ 1: ಭಾರತದ ವೆಬ್ ಸೈಟ್ ಅನ್ನು ಚೀನಾದಲ್ಲಿ ವೀಕ್ಷಿಸಲು ಸಾಧ್ಯವಾಗದಂತೆ ಕ್ಸಿ ಜಿನ್‌ಪಿಂಗ್ ನೇತೃತ್ವದ ಚೀನಾ ಸರ್ಕಾರ ವಿಪಿಎನ್ (ವರ್ಚುಯಲ್ ಪ್ರೈವೇಟ್ ನೆಟ್ವರ್ಕ್) ಅನ್ನು ಬ್ಲಾಕ್ ಮಾಡಿದೆ. ಭಾರತೀಯ ಪತ್ರಿಕೆಗಳು ಮತ್ತು ಟಿವಿ ಚಾನೆಲ್‌ಗಳು ಚೀನೀ ಕಮ್ಯುನಿಸ್ಟ್ ಪ್ರಚಾರ ತಾಣಗಳಿಂದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಕುರಿತು ವರದಿಗಳನ್ನು ತೆಗೆದುಕೊಳ್ಳುತ್ತಲೇ ಇದ್ದರೂ, ವರ್ಚುವಲ್ ಪ್ರೈವೇಟ್ ನೆಟ್‌ವರ್ಕ್ (ವಿಪಿಎನ್) ಸರ್ವರ್ ಇಲ್ಲದೆ ಭಾರತೀಯ ಪತ್ರಿಕೆಗಳು ಮತ್ತು ವೆಬ್‌ಸೈಟ್‌ಗಳನ್ನು ಬೀಜಿಂಗ್‌ನಲ್ಲಿ ವೀಕ್ಷಿಸಲು ಸಾಧ್ಯವಿಲ್ಲ.
ಬೀಜಿಂಗ್ ನಲ್ಲಿರುವ ರಾಜತಾಂತ್ರಿಕ ಮೂಲಗಳ ಪ್ರಕಾರ, ಭಾರತದ ಟಿವಿ ಚಾನೆಲ್ ಗಳನ್ನು ಇಲ್ಲಿಯವರೆಗೆ ಐಪಿ ಟಿವಿ ಮೂಲಕ ವೀಕ್ಷಿಸಲು ಸಾಧ್ಯವಿತ್ತು. ಆದರೆ ಎಕ್ಸ್ ಪ್ರೆಸ್ ವಿಪಿಎನ್ ಕಳೆದ ಎರಡು ದಿನಗಳಿಂದ ಐಫೋನ್ ಹಾಗೂ ಡೆಸ್ಕ್ ಟಾಪ್ ಗಳಲ್ಲಿ ಕೂಡ ಕಾರ್ಯನಿರ್ವಹಿಸುತ್ತಿಲ್ಲ ಎಂದು ತಿಳಿಸಿದೆ.
ವಿಪಿಎನ್‌ಗಳು ಪ್ರಬಲ ಸಾಧನಗಳಾಗಿದ್ದು, ಇದು ಬಳಕೆದಾರರಿಗೆ ಸೆನ್ಸಾರ್ ಶಿಪ್ ನಿರ್ಬಂಧಿಸುವುದನ್ನು ನಿವಾರಿಸಲು ಮತ್ತು ನಿರ್ದಿಷ್ಟ ವೆಬ್‌ಸೈಟ್‌ಗೆ ಭೇಟಿ ನೀಡಲು ಅನುವು ಮಾಡಿಕೊಡುತ್ತದೆ. ಆದರೆ ಚೀನಾ ವಿಪಿಎನ್ ಬ್ಲಾಕ್ ಮಾಡಿರುವುದರಿಂದ, ಭಾರತೀಯ ಆನ್ ಲೈನ್ ಪತ್ರಿಕೆಗಳು ಮತ್ತು ವೆಬ್‌ಸೈಟ್ ಗಳನ್ನು ಚೀನಾದಲ್ಲಿ ವೀಕ್ಷಿಸಲು ಸಾಧ್ಯವಿಲ್ಲ. ವಿಪಿಎನ್ ಗಳನ್ನು ಬ್ಲಾಕ್ ಮಾಡುವ ಅತ್ಯಾಧುನಿಕ ತಂತ್ರಜ್ಞಾನದ ಫೈರ್ ವಾಲ್ ಅನ್ನು ಚೀನಾ ತಯಾರಿಸಿದೆ ಎಂದು ವರದಿಗಳು ತಿಳಿಸಿವೆ.
ಆನ್‌ಲೈನ್ ಸೆನ್ಸಾರ್‌ಶಿಪ್ ಗೆ ಚೀನಾ ಕುಖ್ಯಾತವಾಗಿದ್ದು, ಕ್ಸಿ ಜಿನ್‌ಪಿಂಗ್ ಸರ್ಕಾರವು ಇದನ್ನು ಹೈಟೆಕ್ ವಿಧಾನಗಳೊಂದಿಗೆ ಪರಿಷ್ಕರಿಸಿದೆ. ಉದಾಹರಣೆಗೆ; ಹಾಂಕಾಂಗ್ ಪ್ರತಿಭಟನೆ ಎಂಬ
ಪದವನ್ನು ಸಿಎನ್‌ಎನ್ ಅಥವಾ ಬಿಬಿಸಿಯಲ್ಲಿ ಪ್ರಸ್ತಾಪಿಸಿದಾಗ ತಕ್ಷಣವೇ ಆ ವೆಬ್‌ಸೈಟ್‌ಗಳ ಪರದೆ ಚೀನಾದಲ್ಲಿ ಬ್ಲ್ಯಾಂಕ್ ಆಗುತ್ತದೆ. ಆ ವಿಷಯ ಮುಗಿದ ಬಳಿಕ ಮಾತ್ರ ವೆಬ್‌ಸೈಟ್‌ಗಳ ಪರದೆಯಲ್ಲಿ ಕಾಣಿಸಿಕೊಳ್ಳುತ್ತದೆ ಎಂದೂ ವರದಿಯಲ್ಲಿ ಹೇಳಲಾಗಿದೆ.