ಗುಳ್ಳೆನರಿಯಂತಿರುವ ಚೀನಾದ ಕುತಂತ್ರ
ಭಾರತ ಮತ್ತು ಚೀನಾದ ಗಡಿಭಾಗದಲ್ಲಿ ಉಂಟಾಗಿದ್ದ ಬಿಕ್ಕಟ್ಟು, ವಿಕೋಪಕ್ಕೆ ಹೋದ ಪರಿಣಾಮವಾಗಿ ಭಾರತದ ಇಪ್ಪತ್ತು ಯೋಧರು ವೀರ ಮರಣವನ್ನಪ್ಪಿದರು. ಚೀನಾ ಭಾರತದ ವಿರುದ್ಧ ಕಾಲ್ಕೆರೆದು ಜಗಳಕ್ಕೆ ಬರುವುದು ಇದೇನು ಮೊದಲನೆಯ ಬಾರಿ ಅಲ್ಲ. ಕಳೆದ ಮೂರು ದಶಕಗಳಲ್ಲಿ ಭಾರತ ಮತ್ತು ಚೀನಾ ಗಡಿ ಪ್ರದೇಶಗಳಲ್ಲಿ ಶಾಂತಿಯ ವಾತಾವರಣ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಹಲವಾರು ದ್ವಿಪಕ್ಷೀಯ ಒಪ್ಪಂದಗಳಿಗೆ ಮತ್ತು ನಿಯಮಾವಳಿಗಳಿಗೆ ಉಭಯ ರಾಷ್ಟ್ರಗಳು ಸಹಿ ಹಾಕಿದೆ. ಆದರೆ ಪ್ರತಿ ಬಾರಿಯೂ ಚೀನಾ ಅದನ್ನು ಉಲ್ಲಂಘಿಸಿದೆ ಮತ್ತು ಆರೋಪವನ್ನು ಭಾರತದ ಮೇಲೆ ಹೊರಿಸಿದೆ.
1954ರಲ್ಲಿ ಭಾರತ ಚೀನಾ ನಡುವೆ ಶಾಂತಿಯುತ ಸಂಬಂಧ ಕಾಪಾಡುವ ನಿಟ್ಟಿನಲ್ಲಿ ಅಂದಿನ ಪ್ರಧಾನಿ ಜವಹರಲಾಲ್ ನೆಹರು ನೇತೃತ್ವದ ಸರ್ಕಾರ ಐದು ಅಂಶಗಳ ಒಪ್ಪಂದವೊಂದಕ್ಕೆ ಸಹಿ ಮಾಡಿತು. ಎರಡೂ ದೇಶಗಳ ನಡುವೆ ಆದ ಪಂಚಶೀಲ ತತ್ವಕ್ಕೆ ಭಾರತ ಬದ್ಧವಾಗಿದ್ದರೂ ಚೀನಾ ಮಾತ್ರ ಅಂದಿನಿಂದಲೇ ಒಪ್ಪಂದದ ಅಂಶಗಳನ್ನು ಉಲ್ಲಂಘಿಸುತ್ತಾ ಬಂದಿದೆ. ಈ ಒಪ್ಪಂದ ನಡೆದ ಮರು ತಿಂಗಳಲ್ಲೇ ತನ್ನ ದೇಶದ ನಕ್ಷೆಯಲ್ಲಿ ಭಾರತದ ಭೂಭಾಗವನ್ನು ತನ್ನದೆಂದು ತೋರಿಸಿತು. 1959ರಲ್ಲಿ ಚೀನಾ ವಿರುದ್ಧ ಟಿಬೆಟ್ ನಲ್ಲಿ ನಡೆದ ಹೋರಾಟಕ್ಕೂ ಭಾರತದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿತು. 1962ರಲ್ಲಿ ಭಾರತದ ಮೇಲೆ ಹಠಾತ್ತನೆ ಯುದ್ಧ ಸಾರಿ ನೆಹರು ಆಡಳಿತಕ್ಕೆ ಕಪ್ಪು ಚುಕ್ಕೆಯನ್ನು ಇಟ್ಟಿತ್ತು.
1962ರ ನಂತರ ಭಾರತ ಚೀನಾ ನಡುವೆ ಯುದ್ಧ ನಡೆದಿಲ್ಲವಾದರೂ, ಸಂಘರ್ಷದ ವಾತಾವರಣ ಬಹಳಷ್ಟು ಬಾರಿ ಸೃಷ್ಟಿಯಾಗಿದೆ. ಲಡಾಖ್ ಪೂರ್ವ ಗಡಿಯಲ್ಲಿ ಇರುವ ಗಾಲ್ವಾನ್ ನದಿ ಕಣಿವೆ ಮೇಲೆ ಕಣ್ಣಿಟ್ಟಿರುವ ಚೀನಾ ಪ್ರತಿ ಬಾರಿ ಯುದ್ಧದ ವಾತಾವರಣ ನಿರ್ಮಿಸಿ, ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ತಪ್ಪನ್ನು ಭಾರತದ ಮೇಲೆ ಹೊರಿಸುವುದು ಹೊಸತೇನೂ ಅಲ್ಲ.
ತನ್ನ ಗಡಿಭಾಗದ ಉದ್ದಕ್ಕೂ ರಸ್ತೆಗಳನ್ನು ನಿರ್ಮಿಸಿರುವ ಚೀನಾಕ್ಕೆ ಭಾರತ ಗಡಿಭಾಗದಲ್ಲಿನ ಅಭಿವೃದ್ಧಿ ಕಾರ್ಯದಲ್ಲಿ ನಿರತವಾಗಿರುವ ಜೊತೆಗೆ ರಸ್ತೆ ನಿರ್ಮಾಣದಲ್ಲಿ ತೊಡಗಿರುವುದು ನುಂಗಲಾಗದ ತುತ್ತಾಗಿ ಪರಿಣಮಿಸಿದೆ. ಈ ರಸ್ತೆ ನಿರ್ಮಾಣವಾದರೆ ಚೀನಾ ಸೈನಿಕರ ಚಲನವಲನಗಳ ಮೇಲೆ ಭಾರತಕ್ಕೆ ಕಣ್ಣಿಡಲು ಸಾಧ್ಯವಾಗುತ್ತದೆ ಎಂಬುದು ಚೀನಾದ ಆತಂಕ. ಇದರ ಪರಿಣಾಮವಾಗಿ ನಮ್ಮ ಸೈನಿಕರನ್ನು ಚಿತ್ರ ಹಿಂಸೆ ನೀಡಿ ಮೊಳೆಯುಕ್ತ ಕಬ್ಬಿಣದ ರಾಡುಗಳಿಂದ ಬಡಿದು ಕೊಲ್ಲುವ ಹೇಯ ಕೃತ್ಯವನ್ನು ಚೀನಾ ರೂಪಿಸಿತು.
ಭಾರತ ಸೇರಿದಂತೆ ಇಡೀ ವಿಶ್ವವೇ ಕೊರೊನಾ ಸೋಂಕಿನ ವಿರುದ್ಧ ಹೋರಾಟದಲ್ಲಿ ವ್ಯಸ್ತವಾಗಿರುವ ಈ ಸಮಯದಲ್ಲಿ ಚೀನಾ ಗಡಿ ಪ್ರದೇಶದಲ್ಲಿ ಎಸಗುತ್ತಿರುವ ದುರುಳತನಕ್ಕೆ ವಿಶ್ವದಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ನಮ್ಮ ಸೈನಿಕರ ತ್ಯಾಗ ವ್ಯರ್ಥವಾಗಲು ಬಿಡುವುದಿಲ್ಲ. ನಮ್ಮ ಸಾರ್ವಭೌಮತ್ವವನ್ನು ಮತ್ತು ಗಡಿ ಪ್ರದೇಶಗಳ ಸಮಗ್ರತೆಯನ್ನು ಕಾಪಾಡಿಕೊಳ್ಳಲು ನಾವು ಬದ್ಧ ಎಂದು ಕೇಂದ್ರ ಸರ್ಕಾರ ಹೇಳಿದೆ. ಈ ಸಂದರ್ಭದಲ್ಲಿ ಪ್ರತಿಯೊಬ್ಬರು ನಮ್ಮ ಸೈನ್ಯದೊಂದಿಗೆ ನಿಂತು ಅವರ ಆತ್ಮಸೈರ್ಯವನ್ನು ಹೆಚ್ಚಿಸುವ ಕಾರ್ಯ ಮಾಡಬೇಕು.
ಇದು ರಾಜಕೀಯದ ಸಮಯವಲ್ಲ. ಕೊರೊನಾ ವಿರುದ್ಧ ಹೇಗೆ ಎಲ್ಲರೂ ಒಂದಾಗಿ ಹೋರಾಡುತ್ತಿದ್ದೇವೆಯೋ ಹಾಗೆ ಚೀನಾದ ವಿರುದ್ಧ ಎಲ್ಲರೂ ಒಂದಾಗಿ ಹೋರಾಡುವ ಸಮಯ.