ಯಾರೋ ಒಬ್ಬರು ಚೀನಾ ಕೃತ್ರಿಮ ರಾಷ್ಟ್ರವಲ್ಲ; ಶ್ರೀಮಂತ ಸಂಸ್ಕೃತಿಯ ಪುರಾತನ ಪರಂಪರೆಯ ಸಾರ್ವಭೌಮ ರಾಷ್ಟ್ರ ಎಂದರು. ನನಗ್ಯಾಕೋ ಈ ಚೀನಾ ನಮ್ಮ ರಾಷ್ಟ್ರದ ಗೆಳೆಯ ಎನ್ನುವ ವಿಚಾರ ಒಪ್ಪಿಕೊಳ್ಳಲು ಸಾಧ್ಯವಾಗ್ತಿಲ್ಲ.
1962ಕ್ಕೂ ಮೊದಲು ನೆಹರೂ ಕೂಡಾ ಹೀಗೇ ಭಾವಿಸಿದ್ದರು. ಹಿಂದಿ-ಚೀನಿ ಬಾಯಿ ಬಾಯಿ ಅಂದರು. ಆದರೆ ಅದೇ ಚೀನಾಗೆ ಯುದ್ಧ ಮಾಡಿ ಭಾರತೀಯರನ್ನು ಕಂಗೆಡಿಸುವ ದುರ್ಬುದ್ದಿ ಯಾಕೆ ಬಂತು? ಪುಟ್ಟ ಸಾಂಸ್ಕೃತಿಕ ರಾಷ್ಟ್ರವಾಗಿದ್ದ ಬುದ್ದನ ಅನುಯಾಯಿಗಳೇ ತುಂಬಿದ್ದ ಟಿಬೆಟ್ ನುಂಗಿದ್ದು ಯಾವ ಪುರುಷಾರ್ಥಕ್ಕಾಗಿ? ಈಗ ಹಾಂಗ್ ಕಾಂಗ್ ತಿನ್ನಲು ಹೊಂಚು ಹಾಕಿರುವ ಮರ್ಮವೇನು? ತನ್ನ ಕಮ್ಯೂನಿಷ್ಟ್ ಸಂಗಾತಿ ರಷ್ಯಾದ ತೆಕ್ಕೆಯಿಂದ ಜಾರಿ 2000ರಲ್ಲಿ (ಇಸವಿ ತಪ್ಪಿದ್ದರೆ ತಿಳಿದವರು ಹೇಳಿ ತಿದ್ದುತ್ತೇನೆ) ಡಬ್ಲ್ಯೂಟಿಒ ಅನ್ನೋ ವಿಶ್ವ ವ್ಯಾವಾಹಾರಿಕ ಒಡಂಬಡಿಕೆಗೆ ಸಹಿ ಹಾಕಿದ್ದರ ಹಿಂದಿನ ತರ್ಕವೇನು? ಅಮೇರಿಕಾ ಚೀನಾವನ್ನು ದ್ವೇಷಿಸತ್ತೆ ನಿಜ, ಕಾರಣ ಅತ್ಯಂತ ಸರಳ. ಅವರ ಪ್ರಾಡಕ್ಟ್ ಗಳನ್ನ ಚೀನಾ ನಕಲಿಸಿ ಅವರ ವ್ಯಾಪಾರಕ್ಕೆ ಧಕ್ಕೆ ತರುತ್ತಿದೆ. ನಾಳೆ ಭಾರತದ ಅಪ್ಪಟ ದೇಸಿ ಉತ್ಪನ್ನಗಳನ್ನಾಗಲೀ ಅಥವಾ ಸಂಸ್ಕೃತಿಯನ್ನಾಗಲೀ ಚೀನಾ ನಕಲಿ ಮಾಡಿದರೆ ಭಾರತದ ರಾಜತಾಂತ್ರಿಕ ನೀತಿಯೂ ಹೀಗೇ ಇರುತ್ತದೆ.
ಚೀನಾ ಯಾರಿಗೆ ನಿಷ್ಟವಾಗಿದೆ? ಅಲ್ಲಿ ಕಮ್ಯೂನಿಸಂ ಇಲ್ಲ ಅಲ್ಲಿರುವುದು ಡೆಮಾಕ್ರಸಿಯೇ! ಅದು ಸಮಾಜವಾದಿಯೇ? ಬಂಡವಾಳಶಾಹಿಯೇ? ಚೀನಾಕ್ಕೊಂದು ಬದ್ಧತೆಯಾಗಲಿ ನಿಷ್ಟೆಯಾಗಲಿ ನಿಲುವಾಗಲಿ ಇದೆಯೇ? ನಿಮಗೆ ಅದು ಹೇಗೆ ಚೀನಾ ಸಾರ್ವಭೌಮ ರಾಷ್ಟ್ರ ಅನ್ನಿಸುತ್ತದೆ?
ಇವತ್ತು ಕರೋನಾ ವೈರಸ್ ಇಷ್ಟೆಲ್ಲಾ ಹಾವಳಿ ಮಾಡುತ್ತಿದೆಯಲ್ಲ ಅದರ ಹುಟ್ಟು ಸಂಭವಿಸಿದ ವುಹಾನ್ ಸೇರಿದಂತೆ ಶೇ. 50 ರಷ್ಟು ಚೀನಾದ ಭೂಭಾಗ ಕೊಳಕು ಅಭಿವೃದ್ಧಿ ವಂಚಿತ ಹಿಂದುಳಿದಿರುವ ಪ್ರದೇಶ ಅಂತ ಎಲ್ಲೋ ಓದಿದೆ. ಆದರೆ ಚೀನಾ ತೋರಿಸೋದು ತನ್ನ ಅಭಿವೃದ್ಧಿ ಸಾಧಿಸಿರುವ ಶಾಂಗೈ, ಬೀಜಿಂಗ್, ಹೆಬೈ, ಶೆನ್ಯಾಂಗ್, ತೈಂಜಿನ್ ಮತ್ತೊಂದಷ್ಟು ಪ್ರದೇಶಗಳನ್ನು ಮಾತ್ರ. ಚೀನಿಯರು ತಿನ್ನದೇ ಬಿಟ್ಟ ಜೀವಜಂತುಗಳು ಯಾವುದಾದರೂ ಈ ಸೃಷ್ಟಿಯಲ್ಲಿ ಇದೆಯಾ? ಪೆಂಗೋಲಿನ್ ಅಥವಾ ಚಿಪ್ಪು ಹಂದಿಗಳು ಅನ್ನುವ ಅಮಾಯಕ ಪ್ರಾಣಿಗಳ ಸಂತತಿಯನ್ನು ಭಾಗಶಃ ನುಂಗಿಹಾಕಿದ್ದೇ ಚೀನಿಯರು. ಚೀನಿಯರು ಅತ್ಯಂತ ಕುಖ್ಯಾತ ವೈಲ್ಡ್ ಟ್ರೇಡರ್ ಅಂತ ಹೇಳತ್ತೆ ಐಯುಸಿಎನ್. ಇಂತಿಪ್ಪ ಚೀನಾ ಬಯೋ ವಾರ್ ಆರಂಭಿಸಿದ್ದು ಸುಳ್ಳೇ? ಬೇಕಾದಾಗ ಚೂ ಬಿಡಬಹುದಾದ ವೈರಸ್ ಗಳನ್ನು ತನ್ನ ಲ್ಯಾಬ್ ನಲ್ಲಿ ಇಟ್ಟುಕೊಂಡಿದೆ ಎನ್ನುವ ಕಾನ್ಸ್ಪಿರೆಸಿ ಥಿಯರಿ ಈ ನಿಟ್ಟಿನಲ್ಲಾದರೂ ಸತ್ಯ ಎಂದು ಎನಿಸುವುದಿಲ್ಲವೇ?
ಹೆಜ್ಜೆ ಹೆಜ್ಜೆಗೂ ವಿಷ ಕಾರುವ ನಮ್ಮ ದಾಯಾದಿಗಳಾದ ಪಾಕಿಸ್ತಾನಕ್ಕೆ ಸಹಾಯ ಮಾಡುವ ಚೀನಾ, ಅಲ್ಲಿಗೆ ಎಕನಾಮಿಕಲ್ ಕಾರಿಡಾರ್ ನಿರ್ಮಿಸ ಹೊರಡುವ ಚೀನಾ, ಶ್ರೀಲಂಕಾದಲ್ಲೊಂದು ವಾಯುನೆಲೆ ಮಾಡಲು ಯೋಚಿಸಿದ್ದ ಚೀನಾ, ನೇಪಾಳವನ್ನು ಒಲೈಸಿಕೊಂಡು ಅಧಿಪತ್ಯ ಸಾಧಿಸಿ ತನ್ಮೂಲಕ ಭಾರತದ ಪ್ರಭಾವವನ್ನು ತಗ್ಗಿಸಲು ಹೊಂಚುಹಾಕುವ ಚೀನಾ ಕೃತ್ರಿಮವಲ್ಲದೇ ಇನ್ನೇನು? ಭವಿಷ್ಯದಲ್ಲಿ ಭಾರತಕ್ಕೆ ಅಪಾಯ ಅಂತಿದ್ದರೆ ಅದು ಪಾಕಿಸ್ತಾನದಿಂದಲ್ಲ ಇದೇ ಚೀನಾದಿಂದ. ಇದು ನನ್ನ ಬಲವಾದ ವಾದ. ಸೂಕ್ತ ದಾಖಲೆಗಳಿದ್ದರೆ ಮುಕ್ತವಾಗಿ ಚರ್ಚೆಗೆ ಬನ್ನಿ. ನನ್ನ ಅಭಿಪ್ರಾಯ ಬದಲಾಯಿಸಿಕೊಳ್ಳುತ್ತೇನೆ.

-ವಿಭಾ








